ಬೆಳಗಾವಿ, ಫೆ.29: ವಂಟಮೂರಿ (Vantamuri) ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಘಟನೆಯಂತೆಯೇ ಅದೇ ಬೆಳಗಾವಿಯಲ್ಲಿ (Belagavi) ಮತ್ತೊಂದು ಅಮಾನವೀಯ ಘಟನೆ ಬಹಿರಂಗವಾಗಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಒತ್ತುವರಿ ಪ್ರಶ್ನಿಸಿದ ಬಡ ಕುಟುಂಬದ ಮಹಿಳೆ ಸೀರೆ ಕಳಚಿ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳೆ ಅರೆ ಬೆತ್ತಲೆ ಮಾಡಿ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ, ಮಾಯಪ್ಪ ಹಳ್ಯಾಳ ಎಂಬುವವರು ಸರ್ಕಾರಿ ರಸ್ತೆ ಜೊತೆಗೆ ಬಡ ಕುಟುಂಬಕ್ಕೆ ರಾಜ್ಯ ಸರ್ಕಾರ ನೀಡಿದ್ದ ಜಮೀನು ಒತ್ತುವರಿ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರ ನೀಡಿದ್ದ ಜಮೀನು ಒತ್ತುವರಿ ಮಾಡಿಕೊಂಡ ಬಗ್ಗೆ ಬಡ ಮಹಿಳೆ ಪ್ರಶ್ನೆ ಮಾಡಿದ್ದು ಆರೋಪಿಗಳು ಮಹಿಳೆ ಸೀರೆ ಕಳಚಿ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಮಹಿಳೆ ಅರೆ ಬೆತ್ತಲೆ ಮಾಡಿ ಜೊತೆಗೆ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ರಾಮಪ್ಪ ಭೀಮಪ್ಪ ನಾಗನೂರ ಎಂಬುವವರಿಗೆ 1991ರಲ್ಲಿ ಸರ್ಕಾರದಿಂದ ಮೂರು ಎಕರೆ ಜಮೀನು ಮಂಜೂರಾಗಿತ್ತು. ಇದೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ರಾಮಪ್ಪ ನಾಗನೂರು ಜೀವನ ನಡೆಸುತ್ತಿದ್ದರು. ಇದರ ಮೇಲೆ ಕಣ್ಣು ಹಾಕಿದ ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ, ಮಾಯಪ್ಪ ಹಳ್ಯಾಳ ಎಂಬುವವರು ರಾಮಪ್ಪಗೆ ಸೇರಿದ ಜಮೀನಿನ 20 ಗುಂಟೆ ಒತ್ತುವರಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ನಮಗೆ ರಾಜಕೀಯ ನಾಯಕರ ಸಂಪರ್ಕ ಇದೆ ಎಂದು ಹೇಳಿ ದಬ್ಬಾಳಿಕೆ ಮಾಡ್ತಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿದೆ. ರಾಮಪ್ಪ ನಾಗನೂರಗೆ ಮಂಜೂರಾದ ಜಮೀನು ಜೊತೆಗೆ ರಸ್ತೆಗೆ ಮೀಸಲಿಟ್ಟ ಜಾಗವೂ ಒತ್ತುವರಿ ಮಾಡಿಕೊಳ್ಳಲಾಗಿದೆ. ಒತ್ತುವರಿ ಪ್ರಶ್ನಿಸಲು ಹೋಗಿದ್ದ ರಾಮಪ್ಪ ಪತ್ನಿ ಜಯಶ್ರೀ ಜೊತೆಗೆ ಅಸಭ್ಯ ವರ್ತನೆ ತೋರಿ ಅವಾಚ್ಯ ಶಬ್ಧಗಳಿಂದ ನಿಂದಿಸುವ ಜೊತೆಗೆ ಸೀರೆ ಕಳಚಿ ವಿಕೃತಿ ಮೆರೆದಿದ್ದಾರೆ. ಅಲ್ಲದೇ ಜಯಶ್ರೀ ಪುತ್ರ ಮುರಾರಿ ಮೇಲೂ ಮಾರಣಾಂತಿಕ ಹಲ್ಲೆಗೈದಿದ್ದಾರೆ. ನ್ಯಾಯಕ್ಕಾಗಿ ಎಷ್ಟೇ ಅಲೆದಾಡಿದರೂ ಪೊಲೀಸರು ಕ್ಯಾರೇ ಎನ್ನುತ್ತಿಲ್ಲ ಎಂದು ಟಿವಿ9 ಮುಂದೆ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
.