ಉಡುಪಿ: ಪಾಕಿಸ್ತಾನ ಜಿಂದಾಬಾದ್ (Pro Pakistan Slogan) ಎಂದು ಕೂಗುವ ಮಾನಸಿಕತೆ ಇದ್ದವರನ್ನು ಪೊಲೀಸರು ವಿಧಾನಸೌಧ ಒಳಗೆ ಹೇಗೆ ಬಿಟ್ಟರು?. ರಾಜ್ಯಸಭಾ ಸದಸ್ಯ ಸಯ್ಯದ್ ನಾಸೀರ್ ಹುಸೇನ್ (Syed Naseer Hussain) ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ (Vidhan Soudha) ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವ ಬಗ್ಗೆ ಉಡುಪಿಯಲ್ಲಿ (Udupi) ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಸಯ್ಯದ್ ನಾಸೀರ್ ಹುಸೇನ್ ಬೆಂಬಲಿಗರ ಸಂಪರ್ಕ ಯಾರ ಜೊತೆ ಇದೆ? ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆಯುತ್ತೇನೆ. ನಾಸೀರ್ ಹುಸೇನ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.
ಅಲ್ಲದೆ, ಇದರ ಹಿಂದೆ ಬಹಳ ದೊಡ್ಡ ಷಡ್ಯಂತ್ರ ಇದೆ. ಭಾರತವನ್ನು ವಿಭಜನೆ ಮಾಡುವ ಮಾತನ್ನು ಕಾಂಗ್ರೆಸ್ ಆಡುತ್ತಿದೆ. ಯಾವುದೇ ಸರ್ಕಾರಕ್ಕೆ ಅಧಿಕಾರ ಶಾಶ್ವತವಲ್ಲ. ದೇಶದಲ್ಲಿ ಗೊಂದಲ ನಿರ್ಮಾಣ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಪ್ರಕರಣವನ್ನು ಎನ್ಐಎ ತನಿಖೆ ಮಾಡಿದರೆ ಸತ್ಯಾಸತ್ಯತೆ ಹೊರಬರಲಿದೆ. ಇದರ ಹಿಂದಿರುವ ಶಕ್ತಿಯನ್ನು ಪೊಲೀಸರು ಪತ್ತೆ ಮಾಡಬೇಕು. ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆರೋಪಿಯನ್ನ ಬಂಧಿಸುವಂತೆ ಕೇಳಿಕೊಂಡಿದ್ದೇನೆ ಎಂದರರು.