ಬೆಂಗಳೂರು, ಫೆ.28: ರಾಜ್ಯಸಭೆ ಚುನಾವಣೆ ನಡೆದಿದ್ದು, ಅದರಲ್ಲಿ ನೂತನ ಸಂಸದರಾಗಿ ನಿನ್ನೆ(ಫೆ.27) ಕಾಂಗ್ರೆಸ್‌ನ (Congress)ನಾಸಿರ್ ಹುಸೇನ್‌ಆಯ್ಕೆಯಾಗಿದ್ದಾರೆ. ಈ ಹಿನ್ನಲೆ ಅವರ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡುವ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ಈ ಕುರಿತು ಹಲವು ಬಿಜೆಪಿ(BJP) ನಾಯಕರು ಕಿಡಿಕಾರಿದ್ದರು. ಜೊತೆಗೆ ಇಂದು ವಿಧಾನಸಭೆ ಕಲಾಪದಲ್ಲೂ ಕೂಡ ಸದನದ ಬಾವಿಗಿಳಿದು ಧರಣಿ ನಡೆಸಿದ್ದರು. ಇದರ ಜೊತೆಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿಯೂ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಕಿತ್ತಾಟ ನಡೆಸಿದೆ.
ಪಾ’ಕೈ’ಸ್ತಾನ ಎಂದು ಬಿಜೆಪಿ ಪೋಸ್ಟ್
ಕಾಂಗ್ರೆಸ್ ಚಿಹ್ನೆಯಾದ ಹಸ್ತವನ್ನ ಬಳಸಿ ನಿನ್ನೆ ಪಾ’ಕೈ’ಸ್ತಾನ ಎಂದು ಬಿಜೆಪಿ ಪೋಸ್ಟ್ ಮಾಡಿತ್ತು. ಬಿಜೆಪಿ ಪೋಸ್ಟರ್ ಹಾಕಿದ್ದಕ್ಕೆ ಕೆರಳಿ ಕೆಂಡವಾದ ಕಾಂಗ್ರೆಸ್ ಪಕ್ಷವು, ಅಯೋಗ್ಯ ಬಿಜೆಪಿ ಎಂದು ತಿರುಗೇಟು ನೀಡಿದ್ದಲ್ಲದೆ, ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಠಿಣ ಕ್ರಮ ಜರುಗಿಸುವುದು ನಿಶ್ಚಿತ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿತ್ತು. ಕಾಂಗ್ರೆಸ್ ಎಚ್ಚರಿಕೆಗೆ ಮತ್ತೆ ತಿರುಗೇಟು ನೀಡಿದ ಬಿಜೆಪಿ, ‘ನೀವು ದೂರು ದಾಖಲಿಸುವುದು ಪಾಕ್ನಲ್ಲೋ ಅಥವಾ ಭಾರತದಲ್ಲೋ? ಎಂದು ಕಾಂಗ್ರೆಸ್ ಎಚ್ಚರಿಕೆಗೆ ಮತ್ತೆ ರಾಜ್ಯ ಬಿಜೆಪಿ ಘಟಕ ಟಾಂಗ್ ನೀಡಿತ್ತು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಕಾಂಗ್ರೆಸ್ ಕಾರ್ಯಕರ್ತ
ರಾಜ್ಯಸಭಾ ಚುನಾವಣೆ ಗೆಲುವಿನ ಸಂಭ್ರಮದ ವೇಳೆ ವಿಧಾನಸೌಧದ ಲಾಂಜ್ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಮೊಳಗಿತ್ತು. ನಾಸಿರ್ ಹುಸೇನ್ ಹಿಂದೆ ಇದ್ದ ಯುವಕನೊಬ್ಬ 2 ಬಾರಿ ಪಾಕ್ ಪರ ಘೋಷಣೆ ಕೂಗಿದ್ದ. ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಾಸಿರ್ ಹುಸೇನ್, ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಈ ವೇಳೆ ನಾಸಿರ್ ಹುಸೇನ್ ಹುಸೇನ್ ಪಕ್ಕದಲ್ಲಿ ಇದ್ದ ಯುವಕ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ. ಈ ಹಿನ್ನಲೆ ಬಿಜೆಪಿ ನಾಳೆ(ಫೆ.29) ರಾಜ್ಯಪಾಲರಿಗೆ ದೂರು ನೀಡಲು ಸಜ್ಜಾಗಿದೆ.