ಶಿಮ್ಲಾ: ಹಿಮಾಚಲ ಪ್ರದೇಶದ ರಾಜಕೀಯ ಹೈಡ್ರಾಮ (Himachal Pradesh Political Crisis) ಕ್ಷಣದಿಂದ ಕ್ಷಣಕ್ಕೆ ಕುತೂಹಲ ಪಡೆಯುತ್ತಿದ್ದು, ಇದೀಗ ನಡೆದ ಭಾರೀ ಬೆಳವಣಿಗೆಯೊಂದರಲ್ಲಿ 14 ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸಂಪೂರ್ಣ ಬಹುಮತವಿದ್ದರೂ ಸಹ ಕಾಂಗ್ರೆಸ್ ತನ್ನ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರನ್ನು ರಾಜ್ಯಸಭೆಯಲ್ಲಿ ಗೆಲ್ಲಿಸಲು ಅಸಾಧ್ಯವಾದ ಬೆನ್ನಲ್ಲೇ ಕಾಂಗ್ರೆಸ್‌ಗೆ ಉಂಟಾದ ಇಕ್ಕಟ್ಟಿನ ಪರಿಸ್ಥಿತಿಯ ಮಧ್ಯೆ ಈ ಬೆಳವಣಿಗೆ ನಡೆದಿದ್ದು, ಬಜೆಟ್ ಅಧಿವೇಶನ ನಡೆಯುತ್ತಿರುವಾಗಲೇ ಹಿಮಾಚಲ ಪ್ರದೇಶದ ವಿಧಾನಸಭೆ ಸ್ಪೀಕರ್ ಈ ಕಠಿಣ ಕ್ರಮ ಕೈಗೊಂಡಿದ್ದಾರೆ.
ಬಜೆಟ್ ಅಧಿವೇಶನದ ವೇಳೆ ಸ್ಪೀಕರ್ 14 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದು, ಸದನದಿಂದ ಅಮಾನತುಗೊಂಡಿರುವ ಶಾಸಕರ ಪೈಕಿ ಮಾಜಿ ಸಿಎಂ ಜೈರಾಮ್ ಠಾಕೂರ್ ಕೂಡ ಸೇರಿದ್ದಾರೆ. ಸ್ಪೀಕರ್ ಕುಲದೀಪ್ ಪಠಾನಿಯಾ ಅವರೊಂದಿಗೆ ಬಿಜೆಪಿ ಶಾಸಕರು ಸದನದ ಕಲಾಪದಲ್ಲಿ ಅನುಚಿತ ವರ್ತನೆ ಮತ್ತು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದರು.
ಅಮಾನತುಗೊಂಡ ಶಾಸಕರು ಯಾರು?
ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್, ಡಾ. ವಿಪಿನ್ ಸಿಂಗ್ ಪರ್ಮಾರ್, ರಣಧೀರ್ ಶರ್ಮಾ, ಲೋಕೇಂದ್ರ ಕುಮಾರ್, ವಿನೋದ್ ಕುಮಾರ್, ಡಾ. ಹನ್ಸ್ ರಾಜ್, ಡಾ. ಜನಕ್ ರಾಜ್, ಬಲ್ಬೀರ್ ವರ್ಮಾ, ತ್ರಿಲೋಕ್ ಜಮ್ವಾಲ್, ಸುರೇಂದ್ರ ಶೌರಿ, ದೀಪ್ ರಾಜ್, ಪೂರ್ಣ ಠಾಕೂರ್, ಇಂದರ್ ಸಿಂಗ್ ಗಾಂಧಿ , ದಿಲೀಪ್ ಸಿಂಗ್.ಠಾಕೂರ್ ಅವರನ್ನು ಸದನದ ಕಲಾಪದಿಂದ ಅಮಾನತುಗೊಳಿಸಲಾಗಿದೆ.
ಈ ಹಿನ್ನೆಲೆ ಅನುಚಿತ ವರ್ತನೆ ತೋರಿದ 14 ಶಾಸಕರನ್ನು ಅಮಾನತುಗೊಳಿಸಿ ಕೂಡಲೇ ಸದನದಿಂದ ಹೊರ ಹಾಕುವಂತೆ ಸ್ಪೀಕರ್ ಆದೇಶ ನೀಡಿದರು. ಸದ್ಯ ಸತತ ಗದ್ದಲದ ನಡುವೆ ಸದನದ ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಗಿದೆ. ಹಿಮಾಚಲ ವಿಧಾನಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿರುವುದು ಗಮನಾರ್ಹ.