Breaking News

ಕನ್ನಡದಲ್ಲೇ ಕನ್ನಡಿಗ-ಕನ್ನಡತಿ ಲಗ್ನ

Spread the love

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಸೋಮವಾರ ಕನ್ನಡಮಯವಾದ ಮದುವೆ ನೆರವೇರಿತು. ಸಂಪ್ರದಾಯದ ಕಟ್ಟು‍ಪಾಡು ಮೀರಿದ ಜೋಡಿ ಅಚ್ಚುಕಟ್ಟಾಗಿ, ಕನ್ನಡವನ್ನೇ ಅನುಸರಿಸಿ ಹೊಸಬಾಳಿಗೆ ಕಾಲಿಟ್ಟಿತು.

ಖಾಸಗಿ ಕಂಪನಿಯ ಉದ್ಯೋಗಿಗಳಾದ ಬೆಳಗಾವಿ ತಾಲ್ಲೂಕಿನ ಶಿಂಧೋಳಿಯ ದೀಪಕ್‌ ಮುಂಗರವಾಡಿ ಮತ್ತು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವಗಾಂವದ ರಾಜೇಶ್ವರಿ ವಾಂಗಿ ಅವರ ಮದುವೆ ಕನ್ನಡ ಸಾಹಿತ್ಯ ಸಮ್ಮೇಳನದ ವಾತಾವರಣ ನೆನಪಿಸಿತು.

ಜೋಡಿಯು ಉಂಗುರದಿಂದ ಹಿಡಿದು ಕಲ್ಯಾಣ ಮಂಟಪದವರೆಗೆ ಸಂಪೂರ್ಣವಾಗಿ ಕನ್ನಡ ಅನುಸರಿಸಿತು.

ಪ್ರವೇಶದ್ವಾರದ ಬಳಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳು ಸ್ವಾಗತಿಸಿದರೆ, ಇಡೀ ಕಲ್ಯಾಣ ಮಂಟಪಕ್ಕೆ ಕನ್ನಡ ಧ್ವಜ, ಕನ್ನಡದ ವರ್ಣಮಾಲೆಗಳು ಸೊಬಗು ತಂದವು. ದಿನವಿಡೀ ನಾಡು- ನುಡಿಯ ಹಾಡುಗಳು ರಂಜಿಸಿದವು. ಮದುವೆಗೆ ಬಂದವರೆಲ್ಲ ಸಾಹಿತಿಗಳ ಪುಸ್ತಕ, ಚಿತ್ರ, ಕನ್ನಡ ಧ್ವಜಗಳನ್ನು ಉಡುಗೊರೆಯಾಗಿ ನೀಡಿದರು.

ಕನ್ನಡದಲ್ಲೇ ಕನ್ನಡಿಗ-ಕನ್ನಡತಿ ಲಗ್ನ

‘ನನ್ನ ಮದುವೆ ರಕ್ತಸಂಬಂಧಿಗಳ ಸಮಾಗಮವಲ್ಲ; ಕನ್ನಡ ನಾಡ ಸಂಬಂಧಿಕರ ಸಮಾಗಮ’ ಎಂಬುದು ಸೇರಿ ಕನ್ನಡ ಪರ ಗೋಡೆ ಬರಹಗಳ ಕಂಡವು. ಕರುನಾಡಿನ ನಕ್ಷೆ ಸಿದ್ಧಪಡಿಸಿ ‘ಸೆಲ್ಫಿ ಸ್ಪಾಟ್‌’ ಕೂಡ ಮಾಡಲಾಗಿತ್ತು.

12 ಪುಟಗಳ ಲಗ್ನಪತ್ರಿಕೆಯಲ್ಲೂ ಕನ್ನಡತನ ಕಾಣಸಿಕ್ಕಿತು. ಮುಖ‍‍ಪುಟದಲ್ಲಿ ಭುವನೇಶ್ವರಿ ಚಿತ್ರ, ಕನ್ನಡ ನಕ್ಷೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು, ಕವಿಗಳು, ಶರಣರು, ಸಂತರು, ಚಿತ್ರರಂಗದ ತಾರೆಗಳ ಚಿತ್ರಗಳು ಖುಷಿ ಕೊಟ್ಟವು. ‘ಕನ್ನಡಿಗರ ಮುಂದಿರುವ ಸವಾಲುಗಳು’ ಎಂಬ ವಿಷಯದ ಕುರಿತು ಒಂದು ಪುಟ ಮೀಸಲಿಡಲಾಗಿದೆ.

‘ಸಭಾಂಗಣಕ್ಕೆ ಕಾಲಿಟ್ಟ ನಂತರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದ ಭಾವ ಮೂಡಿತು’ ಎಂದು ಮದುವೆ ಶಾಸ್ತ್ರ ನೆರವೇರಿಸಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಇದು ಕೇವಲ ಮದುವೆಯಲ್ಲ; ದೇಹದ ಕಣಕಣದಲ್ಲೂ ಕನ್ನಡವೇ ಮೇಳೈಸಿದ ಮದುವೆ. ಈ ದಂಪತಿ ಕನ್ನಡ ಪ್ರೇಮ ಶ್ಲಾಘನೀಯ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

‘ಕನ್ನಡವೇ ನಮಗೆ ಜಾತಿ, ಧರ್ಮ ಎಲ್ಲವೂ. ಕನ್ನಡ ಪ್ರೇಮ ಬರೀ ಮಾತಲ್ಲಿ ಇದ್ದರೆ ಸಾಲದು. ಬದುಕಿನಲ್ಲೂ ಅಳವಡಿಸಿಕೊಳ್ಳಬೇಕೆಂದು ಸಾರಲು ಈ ರೀತಿ ಮದುವೆಯಾಗಿದ್ದೇವೆ’ ಎಂದರು ದೀಪಕ್‌-ರಾಜೇಶ್ವರಿ ದಂಪತಿ.


Spread the love

About Laxminews 24x7

Check Also

ಏರ್​ಗನ್​ನಿಂದ ಹಾರಿದ ಗುಂಡು: ಶಿರಸಿಯಲ್ಲಿ 9 ವರ್ಷದ ಬಾಲಕ ಸಾವು

Spread the love ಶಿರಸಿ(ಉತ್ತರಕನ್ನಡ): ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕನ ಕೈಯ್ಯಿಂದ ಏರ್​ಗನ್​ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಹೃದಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ