ಬೆಳಗಾವಿ: ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳನ್ನು ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಆದರೆ, ಬಿಜೆಪಿಯಲ್ಲಿ ಮಾತ್ರ ಇನ್ನೂ ‘ಗುಮ್ಮನ ಗುಸುಕ’ ಎಂಬ ಸ್ಥಿತಿ ಇದೆ. ಯಾರನ್ನು ಕೇಳಿದರೂ ‘ಗೆಲ್ಲುವ ಕುದುರೆ ಹುಡುಕಾಟ’ ಎಂಬ ಉತ್ತರ ಸಿಗುತ್ತದೆ.
‘ನಾವು ಆಕಾಂಕ್ಷಿಗಳು’ ಎಂದು ಇಬ್ಬರು ಮಾತ್ರ ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಕಾರ್ಯಕರ್ತರು, ಸಮುದಾಯದವರು ಸೇರಿ ಯಾರೂ ಸಹ ಇಂಥವರಿಗೇ ಟಿಕೆಟ್ ಕೊಡಬೇಕು ಎಂಬ ಧ್ವನಿ ಎತ್ತಿಲ್ಲ.
ಬೆಳಗಾವಿ ಸಂಸದೆ ಮಂಗಲಾ ಅಂಗಡಿ 2021ರ ಉಪಚುನಾವಣೆಯಲ್ಲಿ ಗೆದ್ದವರು. ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಕೋವಿಡ್‌ನಿಂದ ನಿಧನರಾದ ಬಳಿಕ ಆ ಸ್ಥಾನವನ್ನು ಮಂಗಲಾ ತುಂಬಿದರು. ಅವರ ಎದುರು ಸತೀಶ ಜಾರಕಿಹೊಳಿ (ಸದ್ಯ ಲೋಕೋಪಯೋಗಿ ಸಚಿವ) ಸೋತಿದ್ದರು. ಆಗ ಅನುಕಂಪದ ಅಲೆ ಇದ್ದರೂ ಸಣ್ಣ ಅಂತರದಲ್ಲಿ ಮಂಗಲಾ ಗೆದ್ದರು. ಅವರು ಪಕ್ಕಾ ರಾಜಕೀಯ ‘ಕಸುಬುತನ’ ತೋರಿಸಲಿಲ್ಲ. ಹೀಗಾಗಿ, ಈ ಬಾರಿ ಬೇರೆಯವರಿಗೆ ಟಿಕೆಟ್ ಕೊಡುವ ಚಿಂತನೆ ನಡೆದಿದೆ ಎಂದು ಪಕ್ಷದ ಕೆಲವರು ಹೇಳುತ್ತಾರೆ.
‘ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮತ್ತು ಮಾಜಿ ಶಾಸಕ ಡಾ.ಅಂಜಲಿ ನಿಂಬಾಳಕರ ಅವರಂತೆ ಮಂಗಲಾ ಅವರು ‘ಧಾಡಸಿತನ’ ತೋರಲಿಲ್ಲ. ಹೀಗಾಗಿ, ಅವರನ್ನು ಹಿಂದಿಕ್ಕಿ ಟಿಕೆಟ್ ಗಿಟ್ಟಿಸಲು ಇತರರು ಯತ್ನ ನಡೆಸಿದ್ದಾರೆ’ ಎಂಬ ಮಾತು ಪಕ್ಷದಲ್ಲಿ ಹರಿದಾಡುತ್ತಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ತಿಂಗಳ ಹಿಂದಿನಿಂದಲೇ ಪ್ರಚಾರ ಆರಂಭಿಸಿದ್ದಾರೆ. ಜಂಗಮ ಸಮುದಾಯಕ್ಕೆ ಸೇರಿದ ಅವರಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬುದು ಇನ್ನೂ ದೃಢಪಟ್ಟಿಲ್ಲ.
ಲಿಂಗಾಯತ ಸಮಾಜದವರಾದ ಈರಣ್ಣ ಕಡಾಡಿ (ರಾಜ್ಯಸಭೆ ಸದಸ್ಯ), ಶಂಕರಗೌಡ ಪಾಟೀಲ, ಮಾಜಿ ಶಾಸಕ ಹಾಗೂ ಜೈನ ಸಮುದಾಯದವರಾದ ಸಂಜಯ ಮಾಟೀಲ ಟಿಕೆಟ್ ಕೇಳಿದ್ದಾಗಿ ಹೇಳಿಕೊಂಡಿದ್ದಾರೆ.
ಒಂದು ವೇಳೆ ಕಾಂಗ್ರೆಸ್‌ನಿಂದ ಸಚಿವ ಸತೀಶ ಜಾರಕಿಹೊಳಿ ಸ್ಪರ್ಧಿಸಿದರೆ; ಬಿಜೆಪಿಯಿಂದ ಅವರ ಸಹೋದರ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎಂಬ ಮಾತೂ ಕೇಳಿಬಂದಿದೆ. ಆದರೆ, ಈ ಮಾತನ್ನು ಸತೀಶ ಹಾಗೂ ಬಾಲಚಂದ್ರ ಇಬ್ಬರೂ ತಳ್ಳಿಹಾಕಿದ್ದಾರೆ.
ಅಣ್ಣಾಸಾಹೇಬ ಅಂತಿಮ:
‘ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಗೆ ಮತ್ತೆ ಟಿಕೆಟ್ ಸಿಗಲಿದೆ’ ಎಂದು ಹಿರಿಯ ನಾಯಕರೊಬ್ಬರು ಖಚಿತಪಡಿಸಿದ್ದಾರೆ. ಎರಡು ತಿಂಗಳ ಹಿಂದಿನಿಂದಲೇ ಅವರು ಪ್ರಚಾರ ಶುರು ಮಾಡಿದ್ದಾರೆ. ಗ್ರಾಮೀಣ ಕ್ರೀಡೋತ್ಸವ ಏರ್ಪಡಿಸಿ ಲಕ್ಷಾಂತರ ನಗದು ಬಹುಮಾನ ನೀಡತೊಡಗಿದ್ದಾರೆ.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರೂ ಆದ ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ ಅವರ ಪುತ್ರ, ಉದ್ಯಮಿ ಅಮಿತ್ ಅವರಿಗೆ ಟಿಕೆಟ್ ಕೊಡಿಸುವ ಲಾಬಿ ಕೂಡ ನಡೆದಿದೆ. ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ರಮೇಶ ಕತ್ತಿ ಕೂಡ ಮತ್ತೊಮ್ಮೆ ಅವಕಾಶ ಕೇಳಿದ್ದಾರೆ.
ಜಾತಿ ತಂತ್ರ?:
ಶಾಸಕರಾಗಿದ್ದ ಅನಿಲ ಬೆನಕೆ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಲಾಯಿತು. ಇದರಿಂದ ಬಿಜೆಪಿ ಮರಾಠಾ ಸಮುದಾಯದ ಕೆಂಗಣ್ಣಿಗೆ ಗುರಿಯಾಯಿತು. ಅದನ್ನು ತಿಳಿಗೊಳಿಸಲು ಅನಿಲ ಬೆನಕೆ ಅವರಿಗೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.
ಮಹಿಳಾ ಮತಗಳನ್ನು ಸೆಳೆಯಲು ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನವನ್ನು ಗೀತಾ ಸುತಾರ ಅವರಿಗೆ, ಪರಿಶಿಷ್ಟ ಮತಗಳನ್ನು ಸೆಳೆಯಲು ಚಿಕ್ಕೋಡಿ ಜಿಲ್ಲಾ ಘಟಕದ ಸ್ಥಾನವನ್ನು ಸತೀಶ ಅಪ್ಪಾಜಿಗೋಳ ಅವರಿಗೆ ನೀಡಲಾಗಿದೆ.
‘ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿರುವ ಏಕಮಾತ್ರ ಮಹಿಳಾ ಲೋಕಸಭಾ ಸದಸ್ಯೆ ಮಂಗಲಾ. ಸದ್ಯ ಇದೇ ಅವರ ನೆರವಿಗೆ ಬರುವ ದೊಡ್ಡ ಶಕ್ತಿ. ಈಗ ಆ ಸ್ಥಾನವನ್ನೂ ಕಿತ್ತುಕೊಂಡರೆ ಮಹಿಳಾ ಮತದಾರರು ಪಕ್ಷದಿಂದ ವಿಮುಖವಾಗಬಹುದು.