ಬೆಂಗಳೂರು: ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿ ಸಲ್ಲಿಕೆಗೆ ಕಾಲ ಸನ್ನಿಹಿತವಾಗಿದ್ದು, ಎರಡು ದಿನಗಳಲ್ಲಿ ಸರಕಾರದ ಕೈ ಸೇರುವ ಸಾಧ್ಯತೆ ಇದೆ.
ವರದಿಯು ಮುದ್ರಣ ಹಂತದಲ್ಲಿದ್ದು, ಎರಡು ದಿನಗಳೊಳಗೆ ಸರಕಾರಕ್ಕೆ ಸಲ್ಲಿಕೆಯಾಗಲಿದೆ.
ಈ ಮೂಲಕ ಎಂಟು ವರ್ಷಗಳ ಕುತೂಹಲ ಮತ್ತು ನಿರೀಕ್ಷೆಗಳಿಗೆ ತೆರೆಬೀಳಲಿದೆ. ಬಹುತೇಕ ಅತ್ತ ಅಧಿವೇಶನ ಮುಗಿಯುತ್ತಿದ್ದಂತೆ, ಇತ್ತ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಫೆ. 29 ಕ್ಕೆ ಜಯಪ್ರಕಾಶ ಹೆಗ್ಡೆ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದೆ. ಅದಕ್ಕೂ ಮುಂಚಿತವಾಗಿ ವರದಿ ಸಿದ್ಧಪಡಿಸುವ ಸವಾಲು ಅವರ ಮುಂದಿತ್ತು. ನವೆಂಬರ್‌ನಲ್ಲೇ ಆಯೋಗದ ಅವಧಿ ಮುಗಿದಿತ್ತು. ಆದರೆ, ವರದಿ ಸಿದ್ಧತೆ ಕಾರ್ಯ ಬಾಕಿ ಇದ್ದ ಕಾರಣ ಅವಧಿಯನ್ನು ಜ. 31ರವರೆಗೆ ವಿಸ್ತರಿಸಲಾಗಿತ್ತು. ಈ ಮಧ್ಯೆ ಅಂತಿಮ ಸ್ಪರ್ಶ ನೀಡುವುದು ಬಾಕಿ ಇದೆ ಎಂಬ ಕಾರಣಕ್ಕೆ, ಮತ್ತೆ ತಿಂಗಳಾಂತ್ಯದವರೆಗೆ ಆಯೋಗವನ್ನು ಅಲ್ಪಾವಧಿಗೆ ಮರುನೇಮಿಸಿ ಸರಕಾರ ಆದೇಶಿಸಿತ್ತು.
“ಯಾವುದೇ ಸಂದರ್ಭದಲ್ಲೂ ವರದಿ ಸರಕಾರ ಕೈಸೇರುವ ಸಾಧ್ಯತೆ ಇದೆ. ಅಂಗೀಕರಿಸುವುದು ಬಿಡುವುದು ಸರಕಾರಕ್ಕೆ ಬಿಟ್ಟಿದ್ದು. ಆಯೋಗದ ಕಡೆಯಿಂದ ಎಲ್ಲ ಪ್ರಕ್ರಿಯೆ ಮುಗಿದಿದೆ. ಮುಖ್ಯಮಂತ್ರಿಯವರನ್ನು ಭೇಟಿಯಾಗಿ ವರದಿ ಸಲ್ಲಿಸುವುದೊಂದೇ ಬಾಕಿ. ಹಾಗಾಗಿ, ಅವಧಿ ವಿಸ್ತರಣೆ ಅಥವಾ ಆಯೋಗದ ಮರುನೇಮಕದ ಅಗತ್ಯ ಇರದು’ ಎನ್ನುತ್ತಾರೆ ಅಧಿಕಾರಿಯೊಬ್ಬರು.
ಹಿನ್ನೆಲೆಯೇನು?: 2015ರಲ್ಲಿ ಎಚ್. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಜಾತಿ ಜನಗಣತಿ ನಡೆಸಿತ್ತು.
ಸುಮಾರು 165 ಕೋಟಿ ರೂ. ವೆಚ್ಚದಲ್ಲಿ ನಡೆಸಿದ್ದ ಈ ಸಮೀಕ್ಷೆಯ ದತ್ತಾಂಶ ಆಧರಿಸಿ ಸಿದ್ಧಪಡಿಸಿದ್ದ ಮೂಲಪ್ರತಿ ಆಯೋಗದ ಕಚೇರಿಯಿಂದಲೇ ನಾಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಮಧ್ಯೆ “ವರದಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲೇ ಸಲ್ಲಿಕೆಯಾಗಿದ್ದರೂ, ಅದಕ್ಕೆ ಸದಸ್ಯ ಕಾರ್ಯದರ್ಶಿ ಸಹಿ ಆಗಿರಲಿಲ್ಲ’ ಎಂಬ ವಾದವೂ ಇದೆ. ಇದರೊಂದಿಗೆ ವರದಿ ನೇಪಥ್ಯಕ್ಕೆ ಸರಿದಿತ್ತು. ಮತ್ತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ಜಾತಿ ಜನಗಣತಿ ಸಂಗತಿ ಮುನ್ನೆಲೆಗೆ ಬಂದಿತು. ಇದೇ ಸಂದರ್ಭದಲ್ಲಿ ಬಿಹಾರದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆಯು ಮತ್ತಷ್ಟು ಪುಷ್ಟಿ ನೀಡಿತು.
ಮತ್ತೊಂದೆಡೆ ಈ ಎಲ್ಲ ಬೆಳವಣಿಗೆಗಳ ಮಧ್ಯೆ ಜಾತಿ ಜನಗಣತಿ ಸ್ವೀಕಾರ ಆಕ್ಷೇಪಿಸಿ ಒಕ್ಕಲಿಗ ಸ್ವಾಮೀಜಿಗಳು, ಮುಖಂಡರು ಮುಖ್ಯಮಂತ್ರಿಗೆ ನೀಡಿದ ಪತ್ರದಲ್ಲಿ ಉಪಮುಖ್ಯಮಂತ್ರಿ ಹಾಗೂ ಒಕ್ಕಲಿಗ ಸಮುದಾಯದ ಮುಖಂಡ ಡಿ.ಕೆ.ಶಿವಕುಮಾರ್ ಸಹಿ ಇತ್ತು. ಇದು ಪರ ವಿರೋಧಕ್ಕೆ ಎಡೆಮಾಡಿಕೊಟ್ಟಿತ್ತು.ಇದಾದ ನಂತರ ಹಲವು ವೇದಿಕೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವರದಿ ಸ್ವೀಕಾರಕ್ಕೆ ಬದ್ಧ ಎಂದು ಹೇಳಿದ್ದರು. ಜತೆಗೆ ಈಚೆಗಷ್ಟೇ ಸ್ವತಃ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಕೂಡ, “ವರದಿ ಸ್ವೀಕರಿಸುವ ಬಗ್ಗೆ ಸರಕಾರಕ್ಕೆ ಬದ್ಧತೆ ಇದೆ. ಸ್ವೀಕರಿಸಿಯೇ ತೀರುತ್ತೇವೆ. ಪಲಾಯನದ ಪ್ರಶ್ನೆ ಇಲ್ಲ. ಫೆ. 29ರವರೆಗೆ ಕಾಯಿರಿ’ ಎಂದು ಸುಳಿವು ನೀಡಿದ್ದರು.
ಮತ್ತೆ ಆಯೋಗದ ಅವಧಿ ವಿಸ್ತರಣೆ ಅಗತ್ಯ ಇರಲಾರದು. ನಿಗದಿತ ಅವಧಿ ಯೊಳಗೇ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆದಿದೆ.ಒಂದೆರಡು ದಿನ ಕಾದುನೋಡಿ.
-ಜಯಪ್ರಕಾಶ ಹೆಗ್ಡೆ,
ಅಧ್ಯಕ್ಷರು, ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ