ಬೆಂಗಳೂರು: ರಾಜ್ಯದಲ್ಲಿ ರಾಜ್ಯಸಭಾ ಕದನ (Rajya Sabha Election) ಕುತೂಹಲ ಕೆರಳಿಸಿದೆ. “ನಂಬರ್ ಗೇಮ್” ಆರಂಭವಾಗಿರುವ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳೂ ತಂತ್ರಗಾರಿಕೆಯಲ್ಲಿ ತೊಡಗಿವೆ. ಒಟ್ಟು ನಾಲ್ಕು ಸ್ಥಾನಕ್ಕೆ ಐವರು ಅಭ್ಯರ್ಥಿಗಳು ಇರುವುದರಿಂದ ಚುನಾವಣಾ ಕಣ ರೋಚಕವಾಗಿದೆ.
ಈ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಕಾಂಗ್ರೆಸ್ ತನ್ನ ಶಾಸಕರನ್ನು (Congress MLAs) ರೆಸಾರ್ಟ್‌ಗೆ (Resort Politics) ಶಿಫ್ಟ್ ಮಾಡಲು ಪ್ಲ್ಯಾನ್ ಮಾಡಿದೆ. ಈ ಸಂಬಂಧ ಈಗಾಗಲೇ ಸೂಚನೆಯನ್ನೂ ನೀಡಿದೆ.
ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮೂವರನ್ನು ಗೆಲ್ಲಿಸಿಕೊಂಡು ಬರಲು ಸ್ಪಷ್ಟ ಬಹುಮತ ಇತ್ತು. ಆದರೆ, ಭಾನುವಾರ ಶಾಸಕ ರಾಜವೆಂಕಟಪ್ಪ ನಾಯಕ ಅವರ ನಿಧನದಿಂದ ಈಗ ಕಾಂಗ್ರೆಸ್ ಸಂಖ್ಯಾಬಲ 134ಕ್ಕೆ ಇಳಿದಿದೆ. ಗೆಲ್ಲಲು 135 ಸೀಟುಗಳು ಬೇಕಿದೆ. ಇದು ಕೈಪಡೆ ಇಕ್ಕಟ್ಟಿಗೆ ಕಾರಣವಾಗಿದೆ. ಆದರೆ, ಪಕ್ಷೇತರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ಹೇಳಿದ್ದರೂ ಅವರಿಗೆ ಈಗ ಡಿಮ್ಯಾಂಡ್ ಜಾಸ್ತಿ ಇದೆ.
ಮಂಗಳವಾರ ಬೆಳಗ್ಗೆ 9ರಿಂದ ಸಂಜೆ ನಾಲ್ಕು ಗಂಟೆಯವರೆಗೂ ವಿಧಾನಸೌಧದಲ್ಲಿ ಮತದಾನ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಾಂಗ್ರೆಸ್‌ಗೆ ತಲೆಬಿಸಿ ಇರುತ್ತಿರಲಿಲ್ಲ. ಆದರೆ, ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕೆ ಇಳಿದಿದ್ದಾರೆ. ಹಾಗಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ.