ಚಿತ್ರದುರ್ಗ: ಅಬಕಾರಿ ಇಲಾಖೆಯಿಂದ ಬಾರ್ ಲೈಸೆನ್ಸ್ ಸಿಗೋದು ತುಂಬಾ ಕಷ್ಟ. ಅಂಥದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಕೊಡಿ ಎಂದು ಮನವಿ ಸಲ್ಲಿಸಿದ್ದಾನೆ. ಈ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ಕೋಟಿ ಕೋಟಿ ರೂ.
ಹಣ ಕೊಟ್ಟರೂ ಮದ್ಯ ಮಾರಾಟದ ಲೈಸೆನ್ಸ್ ಸಿಗುವುದೇ ಕಷ್ಟವಾಗಿದೆ. ಅಂಥದ್ದರಲ್ಲಿ ಇಲ್ಲಿ ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಪತ್ರ ಬರೆದಿರುವುದನ್ನು ನೋಡಿ ಅಬಕಾರಿ ಇಲಾಖೆ ಅಧಿಕಾರಿಗಳು ನಗಾಡಿದ್ದಾರೆ.
ರಾಜ್ಯದಲ್ಲಿ ಮದ್ಯ ಮಾರಾಟವನ್ನು ಬಾರ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳು ಸೇರಿ ಇತರೆ ಕೆಲವು ಸ್ಟಾರ್ ಹೋಟೆಲ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ಮದ್ಯ ಮಾರಾಟಕ್ಕೆ ಕಡ್ಡಾಯವಾಗಿ ಲೈಸೆನ್ಸ್ ಇರಲೇಬೇಕು. ಇನ್ನು ಲೈಸೆನ್ಸ್ ಪಡೆಯಬೇಕೆಂದರೆ ಹಲವು ಕಠಿಣ ನಿಯಮಗಳನ್ನು ಪಾಲಿಸಲೇಬೇಕು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸನಾಯಕರಹಟ್ಟಿ ಗ್ರಾಮಸ್ಥ ಚಂದ್ರಶೇಖರ್, ಹಲವು ಬಾರಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು. ಆದರೆ ಪ್ರಯೋಜನವಾಗದೇ ಗೂಡಂಗಡಿಗಳಲ್ಲಿ ಎಗ್ಗಿಲ್ಲದೇ ನಿರ್ಭಯವಾಗಿ ಮದ್ಯ ಮಾರಾಟವಾಗ್ತಿರುವ ಹಿನ್ನೆಲೆಯಲ್ಲಿ ತಾವು ಸಹ ಮದ್ಯ ಮಾರಾಟಕ್ಕೆ ಉತ್ಸುಕರಾಗಿದ್ದು, ಕಿರಾಣಿ ಅಂಗಡಿ ಹಾಗೂ ವಾಸದ ಮನೆಯಲ್ಲೇ ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತೆ ಅಬಕಾರಿ ಇಲಾಖೆ ಹಾಗು ಗ್ರಾ.ಪಂ ಅಧಿಕಾರಿಗಳಿಗೆ ಕೋರಿಕೆ ಪತ್ರ ಸಲ್ಲಿಸಿದ್ದಾರೆ.