Breaking News

ಹುಬ್ಬಳ್ಳಿ: ನಾಲ್ಕು ವರ್ಷಗಳಿಂದ ‘ಶುಚಿ’ ಸ್ಥಗಿತ

Spread the love

ಹುಬ್ಬಳ್ಳಿ: ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಬಾಲಕಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ನೀಡುವ ‘ಶುಚಿ ಯೋಜನೆ’ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದೆ. ಹಣ ನೀಡಿ ಸ್ಯಾನಿಟರಿ ನ್ಯಾಪಕಿನ್ ಖರೀದಿಸಲು ಆಗದ ಬಾಲಕಿಯರು ಮುಟ್ಟಿನ ದಿನಗಳಲ್ಲಿ ಶುಚಿತ್ವಕ್ಕೆ ಬಟ್ಟೆ ಬಳಸುತ್ತಾರೆ.

ಇದರಿಂದ ಚರ್ಮರೋಗ, ಮೂತ್ರರೋಗ ಉಂಟಾಗಬಹುದು ಎಂಬ ಆತಂಕ ಅವರಲ್ಲಿ ಕಾಡುತ್ತಿದೆ.

ಮುಟ್ಟಿನ ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸಲು ಮತ್ತು ಸ್ಯಾನಿಟರಿ ನ್ಯಾಪಕಿನ್ ಬಳಕೆ ಪ್ರೋತ್ಸಾಹಿಸಲು 2013- 14ನೇ ಸಾಲಿನಲ್ಲಿ ಆರಂಭವಾದ ಶುಚಿ ಯೋಜನೆ ಕೋವಿಡ್ ಸಮಯದಲ್ಲಿ ಸ್ಥಗಿತವಾಯಿತು. ಅಷ್ಟೇ ಅಲ್ಲ, ಶಾಲೆಗಳಲ್ಲಿ ಋತುಚಕ್ರ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಾಗಾರಗಳೂ ನಡೆಯುತ್ತಿಲ್ಲ.

‘ಮುಟ್ಟಿನ ದಿನಗಳಲ್ಲಿ ವಿದ್ಯಾರ್ಥಿಗಳು 2ರಿಂದ 3 ದಿನ ತರಗತಿಗಳಿಗೆ ಹಾಜರಾಗಲು ಹಿಂಜರಿಯುತ್ತಾರೆ. ಬಡ ವಿದ್ಯಾರ್ಥಿನಿಯರು ಬಟ್ಟೆ ಬಳಸಿ, ಸಮಸ್ಯೆ ಮಾಡಿಕೊಳ್ಳದಿರಲಿ ಎಂದು ನಾವೇ ಸ್ಯಾನಿಟರಿ ನ್ಯಾಪಕಿನ್‌ಗಳನ್ನು ತಂದು ಶಾಲೆಗಳಲ್ಲಿ ಇಟ್ಟಿರುತ್ತೇವೆ. ಅಗತ್ಯವಿದ್ದಾಗ ವಿದ್ಯಾರ್ಥಿನಿಯರಿಗೆ ಕೊಡುತ್ತೇವೆ’ ಎಂದು ಗದಗ ಜಿಲ್ಲೆಯ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯೊಬ್ಬರು ತಿಳಿಸಿದರು.

ಹುಬ್ಬಳ್ಳಿ: ನಾಲ್ಕು ವರ್ಷಗಳಿಂದ 'ಶುಚಿ' ಸ್ಥಗಿತ

‘ಕೆಲ ಸಂದರ್ಭಗಳಲ್ಲಿ ಈ ಹಿಂದೆ ಕಳಪೆ ಮಟ್ಟದ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ವಿತರಣೆಯಾಗಿವೆ. ಅವುಗಳನ್ನು ಹೆಚ್ಚು ಅವಧಿ ಬಳಸುವುದರಿಂದ ಬೇರೆ ಬೇರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹೀಗಾಗಿ ಅದನ್ನು ವಿದ್ಯಾರ್ಥಿನಿಯರಿಗೆ ವಿತರಿಸಲು ಭಯವಾಗುತಿತ್ತು. ಸರ್ಕಾರವು ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್‌ಕಿನ್‌ ಒದಗಿಸಿದರೆ ಅನುಕೂಲ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕಿಯೊಬ್ಬರು ತಿಳಿಸಿದರು.

ಶುಚಿ ಯೋಜನೆಗೆ ರಾಜ್ಯ ಸರ್ಕಾರ ₹45.5 ಕೋಟಿ ಅನುದಾನ ಮೀಸಲಿಟ್ಟಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಯೋಜನೆಯನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡಿಲ್ಲ. 5 ವರ್ಷಗಳಲ್ಲಿ ಕೇಂದ್ರದ ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಯೋಜನೆಯಡಿ ಋತುಚಕ್ರ ನೈರ್ಮಲ್ಯ ಯೋಜನೆಯ ಅಧ್ಯಯನಕ್ಕೆ ಸಿಕ್ಕ ಅನುದಾನ ಕೇವಲ ₹20.10 ಲಕ್ಷ.

‘ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಸಂಬಂಧಿಸಿದಂತೆ ಮೂರು ಸಲ ಟೆಂಡರ್ ಕರೆದರೂ ಅಂತಿಮಗೊಂಡಿರಲಿಲ್ಲ. ಈಗ ನಾಲ್ಕು ವಿಭಾಗಗಳಲ್ಲಿ ಮೂರು ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ. ಬೆಂಗಳೂರು ಹಾಗೂ ಬೆಳಗಾವಿ ವಿಭಾಗದಲ್ಲಿ ಎಂ.ಡಿ.ಹೈಜಿನ್, ಕಲಬುರ್ಗಿ ವಿಭಾಗದಲ್ಲಿ ಸುಶೀಲ್ ಯಾರ್ನ್, ಮೈಸೂರು ವಿಭಾಗದಲ್ಲಿ ಶ್ರೀರಾಧ್ಯ ಹೈಜಿನ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳಿಗೆ ಟೆಂಡರ್ ನೀಡಲಾಗಿದೆ’ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್ ವಟಾರೆ ತಿಳಿಸಿದರು.

‘ಒಟ್ಟು 19 ಲಕ್ಷ ವಿದ್ಯಾರ್ಥಿನಿಯರು ಫಲಾನುಭವಿಗಳಾಗುವ ನಿರೀಕ್ಷೆಯಿದೆ. ಒಬ್ಬ ವಿದ್ಯಾರ್ಥಿನಿಗೆ 10 ನ್ಯಾಪಕಿನ್‌ಗಳಿರುವ 8 ಪ್ಯಾಕೆಟ್‌ ವಿತರಿಸಲಾಗುವುದು. ಪ್ಯಾಕಿಂಗ್ ಹಂತದಲ್ಲಿದ್ದು, ಸದ್ಯದಲ್ಲೇ ಶಾಲೆಗಳಿಗೆ ತಲುಪಿಸಲಾಗುವುದು’ ಎಂದರು.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ