ಬೆಳಗಾವಿ: ‘ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಬೇಗ ಬಗೆಹರಿಸಲು ಸುಪ್ರೀಂಕೋರ್ಟ್‌ನಲ್ಲಿ ಪ್ರತ್ಯೇಕ ಪೀಠ ಸ್ಥಾಪಿಸಲು ಬೇಡಿಕೆ ಸಲ್ಲಿಸಲಾಗುವುದು’ ಎಂದು ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ ಹೇಳಿದ್ದಾರೆ.
ಮಹಾರಾಷ್ಟ್ರದ ಮುಂಬೈನಲ್ಲಿ ಬುಧವಾರ ಕಾನೂನು ತಜ್ಞರು, ಎಂಇಎಸ್ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳ ಜತೆ ಮಾತಾಡಿದರು.
‘ಈ ಗಡಿ ಸಮಸ್ಯೆ ಇನ್ನೂ ಪರಿಹಾರ ಆಗದಿರುವುದು ಸರಿಯಲ್ಲ. ಈಗಾಗಲೇ ಮೂರು ಬಾರಿ ವಿಚಾರಣೆಗೆ ಪಟ್ಟಿಯಲ್ಲಿ ಬಂದು ಮತ್ತೆ ಕೈಬಿಡಲಾಗಿದೆ. ಗಡಿ ವಿಷಯ ವಿಚಾರಣೆಗೆ ಬಂದಾಗ ಕರ್ನಾಟಕ ಅಥವಾ ಮಹಾರಾಷ್ಟ್ರದ ನ್ಯಾಯಮೂರ್ತಿಗಳು ಇದ್ದ ಕಾರಣ ಅದು ಮುಂದಕ್ಕೆ ಹೋಗಿದೆ. ಆದ್ದರಿಂದ ಈ ಎರಡೂ ರಾಜ್ಯಗಳ ನ್ಯಾಯಮೂರ್ತಿಗಳ ಇಲ್ಲದಂಥ ಪ್ರತ್ಯೇಕ ಪೀಠವು ಇದರ ವಿಚಾರಣೆ ಕೈಗೆತ್ತಿಕೊಳ್ಳಬೇಕಿದೆ. ಅದಕ್ಕಾಗಿ ಮಹಾರಾಷ್ಟ್ರದಿಂದ ಎಲ್ಲ ಪ್ರಯತ್ನ ಮಾಡಲಾಗುವುದು’ ಎಂದರು.
‘865 ಹಳ್ಳಿ- ಪಟ್ಟಣಗಳ ಮರಾಠಿಗರ ಜತೆಗೆ ಮಹಾರಾಷ್ಟ್ರ ಸರ್ಕಾರ ಸದಾ ಇರುತ್ತದೆ. ಅವರ ಎಲ್ಲ ಬೇಡಿಕೆಗಳನ್ನೂ ನಾವು ಈಡೇರಿಸುತ್ತೇವೆ. ಕಷ್ಟ ಕಾಲದಲ್ಲಿ ಅವರೊಂದಿಗೆ ನಿಲ್ಲುತ್ತೇವೆ. ಮರಾಠಿಗರಿಗಾಗಿ ಜನಾರೋಗ್ಯ ವಿಮೆ ಜಾರಿ ಮಾಡಿದ್ದು ದೊಡ್ಡ ಕೊಡುಗೆ. ಅದು ಸುಲಭವಾಗಿ ಜನರಿಗೆ ತಲುಪಬೇಕು ಎಂಬ ಕಾರಣಕ್ಕೆ ಬೆಳಗಾವಿಗೆ ಹತ್ತಿರವಿರುವ ಶಿನೋಳಿಯಲ್ಲಿ ಉಪವಿಭಾಗಾಧಿಕಾರಿ ಹಂತದ ಕಚೇರಿ ತೆರೆಯಲಾಗುತ್ತಿದೆ. ಈಗಾಗಲೇ ಎಲ್ಲ ಸಿದ್ಧತೆ ಮಾಡುವಂತೆ ಕೊಲ್ಹಾಪುರ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಇನ್ನೊಂದು ವಾರದಲ್ಲಿ ಮೂವರು ವಿಶೇಷಾಧಿಕಾರಿಗಳು ನಿಯೋಜನೆಗೊಳ್ಳಲಿದ್ದಾರೆ’ ಎಂದರು.