(ಬೆಳಗಾವಿ ಜಿಲ್ಲೆ): ಇಲ್ಲಿನ ಕೋಟೆ ಆವರಣದಲ್ಲಿ ದೇಶದ 75ಕ್ಕೂ ಹೆಚ್ಚು ಸಂಘಟನೆಗಳು ಬುಧವಾರ ಹಮ್ಮಿಕೊಂಡಿದ್ದ ‘ನಾನೂ ರಾಣಿ ಚನ್ನಮ್ಮ’ ರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ 15 ರಾಜ್ಯಗಳ ಮಹಿಳಾ ಮುಖಂಡರು ಭಾಗವಹಿಸಿ ಸ್ತ್ರೀಶಕ್ತಿ ಪ್ರದರ್ಶಿಸಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ರಾಣಿ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜ್ಯೋತಿ ಮೆರವಣಿಗೆಗೆ ಚಾಲನೆ ನೀಡಿದರು.
‘ನಮ್ಮ ಭೂಮಿ ನಮ್ಮ ಹಕ್ಕು. ಅದನ್ನು ಪಡೆದೇ ತೀರುತ್ತೇವೆ. ಸಂವಿಧಾನ ರಕ್ಷಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಸ್ವಾತಂತ್ರ್ಯ ಹಕ್ಕು ರಕ್ಷಿಸಿಕೊಳ್ಳಲು ಬದ್ಧರಾಗಿದ್ದೇವೆ. ನಿರಂಕುಶಮತಿಯಾದ ಬಂಡವಾಳಶಾಹಿ ಆಡಳಿತದ ವಿರುದ್ಧ ನಿಂತು ನ್ಯಾಯ- ಸಮಾನತೆ ಕೇಳುತ್ತೇವೆ’ ಎಂಬ ನಾಮಫಲಕ ಹಿಡಿದು ಘೋಷಣೆ ಕೂಗಿದರು.
ದೇಶಕ್ಕಾಗಿ ಹೋರಾಡಿದ ಮಹಿಳೆಯರ ಭಾವಚಿತ್ರ ಹೊಂದಿದ ಭಿತ್ತಿಚಿತ್ರಗಳ ಪ್ರದರ್ಶನವನ್ನು ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಉದ್ಘಾಟಿಸಿದರು. ಮಹಾರಾಷ್ಟ್ರದ ಮೇಘಾ ಪನ್ಸಾರೆ, ಆನಿರಾಜಾ, ಅಖಿಲ ಭಾರತ ದಲಿತ ಮಹಿಳಾ ಅಧಿಕಾರ ಮಂಚ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿರಾಮಿ ಜ್ಯೋತಿ, ಸಾಮಾಜಿಕ ಕಾರ್ಯಕರ್ತೆ ದೆಹಲಿಯ ಶಬ್ನಮ್ ಹಶ್ಮಿ, ಸಾಮಾಜಿಕ ಕಾರ್ಯಕರ್ತೆಯರಾದ ಲೀನಾ ಡಬಿರು, ರುತ್ ಮನೋರಮಾ, ತೆಲಂಗಾಣದ ಮೀರಾ ಸಂಘಮಿತ್ರ, ರಾಜಸ್ಥಾನದ ನಿಶಾ ಸಿದ್ದು, ಡಾ.ಎಚ್.ಎಸ್. ಅನುಪಮಾ, ಬಾನು ಮುಷ್ತಾಕ್, ಸಬಿಹಾ ಭೂಮಿಗೌಡ, ಮೀನಾಕ್ಷಿ ಬಾಲಿ, ಸಬಿತಾ ಬನ್ನಾಡಿ, ಅಖಿಲಾ ವಿದ್ಯಾಸಂದ್ರ, ಸುಶೀಲಾ, ಶೈಲಜಾ ಹಿರೇಮಠ ಶಾಂತಲಾ ದಾಮ್ಲೆ, ರೋಹಿಣಿ ಪಾಟೀಲ ಸೇರಿದಂತೆ ಹಲವರು ನೇತೃತ್ವ ವಹಿಸಿದ್ದರು.
ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಗಳಿಸಿದ ಜಯಕ್ಕೆ ಈಗ 200 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಸಮಾವೇಶ ನಡೆಯಿತು. 3,000ಕ್ಕೂ ಹೆಚ್ಚು ಮಹಿಳೆಯರು ಸೇರಿದ್ದರು.