ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗೇನಕೊಪ್ಪದ ಹದ್ದಿನಲ್ಲಿ ಗುರುವಾರ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನೂ ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಧಾರವಾಡ ಹಾಗೂ ಹಾವೇರಿಯ ಎರಡು ಕುಟುಂಬದವರು ಈ ಕಾರಿನಲ್ಲಿದ್ದರು.
ಧಾರವಾಡದವರಾದ ಕಾರ್ ಚಾಲಕ ಶಾರೂಖ್ ಪೆಂಡಾರಿ (30), ಇಕ್ಬಾಲ್ ಜಮಾದಾರ (50), ಹಾವೇರಿಯವರಾದ ಸಾನಿಯಾ ಲಂಗೋಟಿ (37), ಉಮ್ರಾ ಬೇಗಮ್ ಲಂಗೋಟಿ (17), ಶಬನಮ್ ಲಂಗೋಟಿ (37), ಫರಾನ್ ಲಂಗೋಟಿ (13) ಮೃತಪಟ್ಟವರು.
ಧಾರವಾಡದ ಫರ್ಹಾತ್ ಬೆಟಗೇರಿ (18), ಸಾನಿಯಾ ಇಕ್ಬಾಲ್ ಜಮಾದಾರ (36), ಹಾವೇರಿಯ ಸೋಫಿಯಾ ಲಂಗೋಟಿ (22) ಹಾಗೂ ಮಹಿನ್ ಲಂಗೋಟಿ (7) ಗಾಯಗೊಂಡಿದ್ದಾರೆ.
ಖಾನಾಪುರ ತಾಲ್ಲೂಕಿನ ಗೋಲ್ಯಾಳ ಗ್ರಾಮದಲ್ಲಿ ಗುರುವಾರ ಸಂಬಂಧಿಕರ ಮದುವೆ ಇತ್ತು. ಆ ಮದುವೆಯ ಕೆಲ ಸಾಮಗ್ರಿಗಳು ಇವರ ಕಾರಿನಲ್ಲಿದ್ದವು. ಮದುವೆ ಕಾರ್ಯಕ್ಕೆ ತಡವಾದ ಕಾರಣ ಬೇಗ ಬರುವಂತೆ ಸಂಬಂಧಿಕರು ಫೋನ್ ಮಾಡುತ್ತಿದ್ದರು. ಇದರಿಂದ ಕಾರ್ ಚಾಲಕ ವೇಗವಾಗಿ ಓಡಿಸುತ್ತಿದ್ದ.
ಚನ್ನಮ್ಮನ ಕಿತ್ತೂರು ಕಡೆಯಿಂದ ಬೀಡಿ ಗ್ರಾಮದ ಕಡೆಗೆ ಹೊರಟಿದ್ದ ಕಾರಿನಲ್ಲಿ ಮೂವರು ಮಕ್ಕಳೂ ಸೇರಿದಂತೆ 10 ಮಂದಿ ಪ್ರಯಾಣಿಸುತ್ತಿದ್ದರು. ಕಾರು ಮಂಗೇನಕೊಪ್ಪ ಗ್ರಾಮದ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆಯಿತು ಎಂದು ಮೂಲಗಳು ತಿಳಿಸಿವೆ.