ಬೆಂಗಳೂರು,ಫೆ.22- ಸದನದಲ್ಲಿ ಸಚಿವರು, ಅಧಿಕಾರಿಗಳು ಹಾಜರಿಲ್ಲ. ಹೀಗಾದರೆ ಸದನ ಏಕೆ ನಡೆಸಬೇಕು ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ತೀವ್ರ ಆಕ್ಷೇಪವನ್ನು ವಿಧಾನಸಭೆಯಲ್ಲಿಂದು ವ್ಯಕ್ತಪಡಿಸಿದರು. ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಅಶೋಕ್‍ರವರು ಆಡಳಿತ ಪಕ್ಷದ ಮುಂದಿನ ಎರಡೂ ಸಾಲುಗಳು ಖಾಲಿ ಇವೆ.
ಮಂತ್ರಿಗಳಿಲ್ಲ, ಅಧಿಕಾರಿಗಳೂ ಇಲ್ಲ. ಹೀಗಾದರೆ ಏಕೆ ಅಧಿವೇಶನ ನಡೆಸಬೇಕು, ನಮಗೂ ಕಾರ್ಯಕ್ರಮಗಳಿವೆ, ಪ್ರವಾಸ ಹೋಗಬೇಕಿತ್ತು. ಅಧಿವೇಶನ ಮುಖ್ಯವಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ? ಅವರದೇ ಆದ ಅಜೆಂಡಾ ಹಮ್ಮಿಕೊಂಡಿದ್ದಾರೆ. ನಮಗೆಲ್ಲಾ ಜ್ವರ, ನೆಗಡಿ, ತಲೆನೋವು, ಗಂಟಲುನೋವು, ಕಣ್ಣಿನ ಸೋಂಕು ಉಂಟಾಗಿದೆ. ಪ್ರತಿದಿನ 7 ಗಂಟೆ ಅಧಿವೇಶನದಲ್ಲಿ ಕೂರುತ್ತಿದ್ದೇವೆ. 8 ಗಂಟೆ ಅಧಿವೇಶನ ನಡೆಸಲು ನಮಗೇನು ತಕರಾರಿಲ್ಲ. ಸಮಯಕ್ಕೆ ಸರಿಯಾಗಿ ಸಚಿವರು ಬರಬೇಕಲ್ಲವೇ? ನಿರಂತರವಾಗಿ ಎಸಿಯಲ್ಲಿ ಕೂರುವುದರಿಂದರ ಆರೋಗ್ಯವೂ ಹದಗೆಡುತ್ತಿದೆ ಎಂದರು. ಆಗ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ನನಗೂ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.