ದೆಹಲಿ,ಫೆ.22- ಮುಂಬರುವ ಲೋಕಸಭೆ ಚುನಾವಣೆ ಹಾಗೂ ಪ್ರಸಕ್ತ ರಾಜ್ಯಸಭೆ ಚುನಾವಣೆ ಕಾರ್ಯತಂತ್ರ ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಷಾ ಇಂದು ಮಾತುಕತೆ ನಡೆಸಿದ್ದಾರೆ. ನವದೆಹಲಿ ನಿವಾಸದಲ್ಲಿ ಅಮಿತ್ ಷಾ ಕುಮಾರಸ್ವಾಮಿ ಭೇಟಿಯಾಗಿ ಸುಮಾರು ಅರ್ಧಗಂಟೆ ಕಾಲ ರಾಜ್ಯಸಭೆ ಚುನಾವಣೆ ಕಾರ್ಯತಂತ್ರ, ಲೋಕಸಭೆ ಚುನಾವಣೆ ಸಿದ್ಧತೆ, ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರಗಳ ಹಂಚಿಕೆ, ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ನಿನ್ನೆ ಸಂಜೆ ದೆಹಲಿಗೆ ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರೊಂದಿಗೆ ತೆರಳಿದ್ದ ಕುಮಾರಸ್ವಾಮಿಯವರು ಅಮಿತ್ ಷಾರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವಿಧಾನಪರಿಷತ್‍ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿಗೆ ಉಂಟಾಗಿರುವ ಸೋಲಿನ ಪರಾಮರ್ಶೆಯನ್ನು ಮಾಡಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಎನ್‍ಡಿಎ 2ನೇ ಅಭ್ಯರ್ಥಿ ಕುಪೇಂದ್ರರೆಡ್ಡಿಯವರ ಗೆಲುವಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.