ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ
ಕೊಪ್ಪಳ, ಫೆ.21: ಕೊಪ್ಪಳ ಜಿಲ್ಲಾ ಆಸ್ಪತ್ರೆ(Koppal District Hospital) ಜಿಲ್ಲೆಯಲ್ಲಿರುವ ಏಕೈಕ ಸರ್ಕಾರಿ ದೊಡ್ಡ ಆಸ್ಪತ್ರೆ. ಕೊಪ್ಪಳ ವೈದ್ಯಕೀಯ ಕಾಲೇಜಿನ ಅಧೀನದಲ್ಲಿರುವ ಈ ಆಸ್ಪತ್ರೆಗೆಕೊಪ್ಪಳ ಜಿಲ್ಲೆಮಾತ್ರವಲ್ಲ, ಸುತ್ತಮುತ್ತಲಿನ ವಿಜಯನಗರ, ರಾಯಚೂರು ಜಿಲ್ಲೆಯ ಅನೇಕ ತಾಲೂಕಿನಿಂದಲೂ ಪ್ರತಿನಿತ್ಯ ನೂರಾರು ರೋಗಿಗಳು ಬರುತ್ತಾರೆ. ಬೇರೆ ಆಸ್ಪತ್ರೆಗೆ ಹೋಲಿಸಿದರೆ ಇಲ್ಲಿ ತಕ್ಕಮಟ್ಟಿನ ಉತ್ತಮ ಚಿಕಿತ್ಸೆ ಸಿಗುತ್ತದೆ. ಹೀಗಾಗಿ ಹೆಚ್ಚಿನ ರೋಗಿಗಳು ತಮ್ಮ ಅನೇಕ ಖಾಯಿಲೆಗಳ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬರುತ್ತಾರೆ. ಸಾರಿಗೆ ಸಂಪರ್ಕ ಸರಿಯಿಲ್ಲದೇ ಇದ್ದರೂ ಕೂಡ ಕಷ್ಟಪಟ್ಟು ಚಿಕಿತ್ಸೆಗಾಗಿ ಬರುತ್ತಾರೆ. ಆದ್ರೆ, ಇಲ್ಲಿ ಬಂದ ಮೇಲೆ ಮತ್ತೆ ಚಿಕಿತ್ಸೆ ಪಡೆಯಲು ಕಷ್ಟಪಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚೀಟಿ ಮಾಡಿಸಲಿಕ್ಕೆ ಗಂಟೆಗಟ್ಟಲೆ ಕಾಯಬೇಕಾದ ದುಸ್ಥಿತಿ
ಚಿಕಿತ್ಸೆ ಪಡೆಯಬೇಕಾದ್ರೆ ಹೋರ ರೋಗಿಗಳ ಚೀಟಿಯನ್ನು ಮಾಡಿಸಬೇಕು. ಇದು ನಿಯಮ ಕೂಡ ಹೌದು. ಇಲ್ಲಿ ಹೆಸರು ನೊಂದಾಯಿಸಿ, ಚೀಟಿ ನೀಡಿದ ಮೇಲೆ ಯಾವ,ಸಮಸ್ಯೆಯಿದೆ, ಯಾವ ವೈದ್ಯರ ಬಳಿ ಹೋಗಬೇಕು ಎನ್ನುವುದನ್ನು ಚೀಟಿ ನೀಡಿದ ಸಿಬ್ಬಂದಿ ಹೇಳುತ್ತಾರೆ. ಆದ್ರೆ, ಈ ಚೀಟಿಯನ್ನು ಮಾಡಿಸಲಿಕ್ಕೇನೆ ರೋಗಿಗಳು ಪರದಾಡಬೇಕಾಗಿದೆ. ಒಬ್ಬಬ್ಬರೂ ಚೀಟಿ ಮಾಡಿಸಲು ಒಂದರಿಂದ ಒಂದುವರೆ ಗಂಟೆ ಕಾಯಬೇಕಾಗಿದೆ. ಮುಂಜಾನೆ ಹತ್ತರಿಂದ ಮಧ್ಯಾಹ್ನ ಒಂದು ಗಂಟೆವರೆಗೆ ವೈದ್ಯರು ಇರುತ್ತಾರೆ. ಆದ್ರೆ, ಬಹುತೇಕರಿಗೆ ಚೀಟಿ ಸಿಗುವ ಹೊತ್ತಿಗೆ, ವೈದ್ಯರು ಊಟಕ್ಕೆ ಹೋಗಿರ್ತಾರೆ. ಮತ್ತೆ ಅವರು ಸಂಜೆ ಬರೋವರೆಗೂ ಕಾಯಬೇಕು. ಸಂಜೆ ಚಿಕಿತ್ಸೆ ಪಡೆದು ಊರಿಗೆ ಹೋಗಲು ಮತ್ತೆ ಬಸ್ಗಳಿಗಾಗಿ ಜನರು ಪರದಾಡಬೇಕಾಗುತ್ತದೆ. ಹೀಗಾಗಿ ಬೇಗನೆ ಚೀಟಿ ಸಿಕ್ಕರೆ, ಬೇಗನೆ ಚಿಕಿತ್ಸೆ ಸಿಗುತ್ತದೆ ಎನ್ನುತ್ತಾರೆ ರೋಗಿಗಳು.