ಬೆಂಗಳೂರು : ಸದನದಲ್ಲಿ ಊಟ ಮಾತ್ರವಲ್ಲ ಹಾಸಿಗೆ ದಿಂಬು ಸಹ ನೀಡಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮನವಿ ಮಾಡಿಕೊಂಡ ಸನ್ನಿವೇಶ ಸೋಮವಾರ ಅಧಿವೇಶನದ (Assembly session) ವೇಳೆ ನಡೆಯಿತು.
ಸದನದಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ.
ಮಧ್ಯಾಹ್ನ ಊಟಕ್ಕೆಂದು ಹೊರಹೋದವರು ವಾಪಸ್ ಬರುವುದೇ ಇಲ್ಲ ಎಂದು ಆಕ್ಷೇಪಿಸಿದ ಸಭಾಪತಿ ಯು.ಟಿ ಖಾದರ್ ಸದಸ್ಯರ ವರ್ತನೆಯನ್ನು ಸುಧಾರಿಸಿಕೊಳ್ಳಬೇಕು ಎಂದರು. ಊಟಕ್ಕೆ ಯಾರೂ ಹೊರಗೆ ಹೋಗುವುದು ಬೇಡ. ಇಡೀ ಬೆಂಗಳೂರಿನಲ್ಲಿಯೇ ಎಲ್ಲೂ ಸಿಗದ ಅತ್ಯುತ್ತಮ ಸಸ್ಯಾಹಾರಿ ಊಟದ ವ್ಯವಸ್ಥೆಯನ್ನು ವಿಧಾನಸೌಧದಲ್ಲೇ ಮಾಡಲಾಗಿದೆ. ಹೀಗಾಗಿ ಊಟಕ್ಕೆ ಹೊರ ಹೋಗುವ ಅವಶ್ಯಕತೆಯಿಲ್ಲ ಎಂದರು.
ಈ ವೇಳೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ಊಟವಾದ ಬಳಿಕ ಒಳ್ಳೆಯ ಹಾಸಿಗೆ ಮತ್ತಿತರ ವ್ಯವಸ್ಥೆಯನ್ನೂ ಸಹ ಮಾಡಿಬಿಡಿ. ನಾವೆಲ್ಲರೂ ನಿಮಗೆ ಆಶೀರ್ವದಿಸುತ್ತೇವೆ ಎಂದು ಚಟಾಕಿ ಹಾರಿಸಿದರು.
ಈ ಸಲಹೆಯನ್ನು ಉಪೇಕ್ಷಿಸಿದ ಯು.ಟಿ.ಖಾದರ್, ನಸುನಕ್ಕು ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು.