ಬೆಳಗಾವಿ: ಬದುಕಿಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡು ಅರಣ್ಯರೋದನ ಅನುಭವಿಸುತ್ತಿದ್ದ ಹಿರಿಯ ವಯಸ್ಸಿನ ತಾಯಿ ಸಂಕಷ್ಟಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನ ಮಿಡಿದಿದ್ದಾರೆ. ಗೃಹಲಕ್ಷ್ಮಿ ಯೋಜನೆ ಮೂಲಕ ಒಂದು ವರ್ಷಕ್ಕೆ ಜಮಾ ಆಗುವ ಹಣದಷ್ಟು ವೈಯಕ್ತಿಯವಾಗಿ ನೆರವಿನ ಹಸ್ತ ಚಾಚಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದರು. ಈತನ ತಾಯಿ ನೀಲವ್ವ ಗುರಕ್ಕನವರ ಮಗನನ್ನು ಕಳೆದುಕೊಂಡು, ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗದೇ ಅಸಹಾಯಕರಾಗಿದ್ದರು. ನಂತರ ಮಾಜಿ ಮೇಯರ್ ವಿಜಯ ಮೋರೆ ಅವರ ಪುತ್ರ ಅಲೆನ್ ಮತ್ತು ಅವರ ಗೆಳೆಯರ ನೆರವಿನಿಂದ ಮಗನ ಅಂತ್ಯಸಂಸ್ಕಾರ ನೆರೆವೇರಿಸಿದ್ದರು. ಅಂತ್ಯಸಂಸ್ಕಾರದ ವೇಳೆ ಗೃಹಲಕ್ಷ್ಮಿ ಯೋಜನೆಯಿಂದ ಪಡೆಯುತ್ತಿರುವ ಮಾಸಿಕ 2 ಸಾವಿರ ರೂಪಾಯಿ ಹಣದ ಕುರಿತು ಪ್ರಸ್ತಾಪಿಸಿ ಆಕ್ರಂದನ ವ್ಯಕ್ತಪಡಿಸಿದ್ದರು.