ಬೆಂಗಳೂರು ; ಬೇಸಿಗೆ ಆರಂಭಕ್ಕೆ ಮುನ್ನವೇ ಬೆಂಗಳೂರಿನಲ್ಲಿ ನೀರಿನ ಕೊರತೆ (Water scarcity) ಎದುರಾಗಿದೆ. ಟ್ಯಾಂಕರ್ ನೀರೂ (Tanker water) ಸಹ ದಿನೇ ದಿನೇ ದುಬಾರಿಯಾಗುತ್ತಾ ಸಾಗುತ್ತಿದ್ದರೂ ಜನರು ನೀರು ಪೋಲು ಮಾಡುತ್ತಿರುವುದು ನಗರಕ್ಕೆ ನುಂಗಲಾರದ ತುತ್ತಾಗಿದೆ.
ಈ ನಡುವೆ ಟ್ಯಾಂಕರ್ ನೀರು ಪೂರೈಕೆ ಮಾಫಿಯಾ ತಡೆಗಟ್ಟಲು ಜಲಮಂಡಳಿ ಏಕರೂಪ ದರ ನಿಗದಿಗೆ ಮುಂದಾಗಿದೆ.
ಬೆಂಗಳೂರಿನಲ್ಲಿ ಐದು ಹಂತಗಳಲ್ಲಿ ಕಾವೇರಿ ನೀರು ಪೂರೈಸಲಾಗುತ್ತಿದ್ದು ಪ್ರತಿದಿನ ನಗರವಾಸಿಗಳ ಬಳಕಗೆ ಎರಡು ಟಿಎಂಸಿ ನೀರು ಮೀಸಲಿಡಲಾಗಿದೆ. ಆದರೆ ಯಥೇಚ್ಛವಾಗಿ ನೀರು ಸಿಗುವ ಬಡಾವಣೆಗಳಲ್ಲಿ ರಸ್ತೆ ತೊಳೆಯಲು ಹಾಗೂ ಕಾರ್ ಸ್ವಚ್ಛಗೊಳಿಸಲು ಕಾವೇರಿ ನೀರು ಬಳಸುತ್ತಿದ್ದರೆ, ಮಿಕ್ಕ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಪರದಾಟ ಪ್ರಾರಂಭವಾಗಿದೆ.

ಈ ನಡುವೆ ಜನರ ನೀರಿನ ಕೊರತೆಯನ್ನೇ ಬಂಡವಾಳವಾಗಿರಿಸಿಕೊಂಡ ಟ್ಯಾಂಕರ್ ಮಾಫಿಯಾ ನೀರಿನ ಬೆಲೆಯನ್ನು ಮೂರು ನಾಲ್ಕು ಪಟ್ಟು ಏರಿಕೆಮಾಡಿದೆ. ಇದಕ್ಕೆ ಕಡಿವಾಣ ಹಾಕಲು ಸಿದ್ದತೆ ನಡೆಸಿರುವ ಬೆಂಗಳೂರು ಜಲಮಂಡಳಿ ಖಾಸಗಿ ನೀರಿನ ಟ್ಯಾಂಕರ್ ಗೆ ಏಕರೂಪ ದರ ನಿಗದಿ ಮಾಡಲು ಸಿದ್ಧತೆ ನಡೆಸುತ್ತಿದೆ.
ಈ ಹಿಂದೆ ಬಿಬಿಎಂಪಿ 5 ಸಾವಿರ ಲೀಟರ್ ಟ್ಯಾಂಕರ್ಗೆ 540 ರೂ. ದರ, 12 ಸಾವಿರ ಲೀಟರ್ ನೀರಿನ ಟ್ಯಾಂಕರ್ ಗೆ 1 ಸಾವಿರ ರೂ. ದರ, 20 ಸಾವಿರ ಲೀಟರ್ ನೀರಿನ ಟ್ಯಾಂಕರ್ ಗೆ 1500 ರೂ. ದರ ನಿಗದಿ ಮಾಡಿತ್ತು. ಆದರೆ ಪಾಲಿಕೆ ನಿಗದಿ ಮಾಡಿರುವ ನೀರಿನ ದರಕ್ಕೆ ಯಾರೂ ಕೂಡ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದಿದೆ.
ನೀರಿಗೆ ಹಾಹಾಕಾರ ಶುರುವಾಗ್ತಿದ್ದಂತೆ ಏಕಾಏಕಿಯಾಗಿ 3-4 ಪಟ್ಟು ದರ ಏರಿಕೆಯಾಗಿದ್ದು, ಟ್ಯಾಂಕರ್ ಮಾಲೀಕರ ಬೇಕಾಬಿಟ್ಟಿ ಸುಲಿಗೆ ವಿರುದ್ಧ ಬಿಬಿಎಂಪಿ ಹಾಗೂ ಜಲಮಂಡಳಿಗೆ ಸಾರ್ವಜನಿಕರಿಂದ ದೂರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹಣ ವಸೂಲಿ ಮಾಡಿದ್ರೆ ಅಂತವರ ಟ್ರೇಡ್ ಲೈಸೆನ್ಸ್ ರದ್ದು ಮಾಡಲು ಜಲಮಂಡಳಿ ಮುಂದಾಗಿದೆ.
Laxmi News 24×7