ಬೆಳಗಾವಿ, : ಸ್ಮಶಾನ ವಿಲ್ಲದ ಕಾರಣ ಈ ಹಿಂದೆ ಜಮೀನೊಂದರಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಆದರೆ ಈಗ ಜಮೀನಿನ ಮಾಲೀಕ (Land Owner) ಕೋರ್ಟ್ ಆರ್ಡರ್ ತಂದಿದ್ದು ಅಂತ್ಯಸಂಸ್ಕಾರಕ್ಕೆ (Last Rites) ಅಡ್ಡಿಪಡಿಸಿದ್ದಾನೆ. ಈ ಹಿನ್ನೆಲೆ ಕುಟುಂಬಸ್ಥರು, ಸಂಬಂಧಿಗಳು ಕಳೆದ ಎರಡು ಗಂಟೆಗಳಿಂದ ಸ್ಥಳದಲ್ಲಿ ಶವ ಇಟ್ಟು ಆಕ್ರೋಶ ಹೊರ ಹಾಕಿದ್ದರು. ಸದ್ಯ ಗಲಾಟೆಯಿಂದ ಬೇಸತ್ತ ಮಹಿಳೆಯರು ಮುನ್ನುಗ್ಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಬೆಳಗಾವಿ (Belagavi) ತಾಲೂಕಿನ ಕಾವಳೇವಾಡಿ ಗ್ರಾಮದಲ್ಲಿ ಸ್ಮಶಾನವಿಲ್ಲದೆ, ಅಂತ್ಯಸಂಸ್ಕಾರ ಮಾಡಲಾಗದೆ ಪರದಾಡುವಂತಹ ಪರಿಸ್ಥಿತಿ ಇದೆ.
ತುಕಾರಾಮ್ ಮೋರೆ ಎನ್ನುವವರು ನಿನ್ನೆ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಜಮೀನಿನ ಬಳಿ ಚಿತೆ ಸಿದ್ದಗೊಳಿಸಿದ್ದರು. ಇನ್ನೇನು ಅಂತ್ಯಸಂಸ್ಕಾರ ಮಾಡಬೇಕು ಎನ್ನುವಷ್ಟರಲ್ಲಿ ಜಮೀನು ಮಾಲೀಕ ಆಕ್ಷೇಪ ವ್ಯಕ್ತಪಡಿಸಿದ್ದ. ನನ್ನ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಬೇಡಿ ಎಂದು ಕೋರ್ಟ್ ಆರ್ಡರ್ ತಂದಿದ್ದಾನೆ. ಆದರೆ ಈ ಹಿಂದಿನಿಂದಲೂ ಇದೇ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಇಲ್ಲೇ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ವಿವಾದಿತ ಜಾಗದಲ್ಲೇ ಶವ ಇಟ್ಟು ಗ್ರಾಮಸ್ಥರು ಧರಣಿ ನಡೆಸಿದ್ದರು.