ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚತೊಡಗಿದೆ. ಮುಂದಿನ ದಿನಗಳಲ್ಲಿ ಇದು ತಾರರಕ್ಕೆ ಹೋಗುವ ಸಾಧ್ಯತೆ ಇದೆ. ಇದರ ನಿವಾರಣೆ ಮತ್ತು ತುರ್ತು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು ಜಿಲ್ಲೆಯ ಬರಪೀಡಿತ ಪ್ರತಿ ತಾಲ್ಲೂಕಿಗೆ ₹25 ಲಕ್ಷದಂತೆ 8 ತಾಲ್ಲೂಕುಗಳಿಗೆ ತಾತ್ಕಾಲಿಕವಾಗಿ ₹2 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಧಾರವಾಡ, ಅಳ್ನಾವರ, ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ಶಹರ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಮತ್ತು ಕಲಘಟಗಿ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳಬಹುದಾದ ಒಟ್ಟು 139 ಗ್ರಾಮಗಳನ್ನು ಪ್ರಸ್ತುತ ಗುರುತಿಸಿದೆ.
ಧಾರವಾಡ ತಾಲ್ಲೂಕಿನಲ್ಲಿ ಪ್ರಸ್ತುತ 17 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದಾದ ಸಂಭವನೀಯ ಗ್ರಾಮಗಳು ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ತಾಲ್ಲೂಕು ವ್ಯಾಪ್ತಿಯ 16 ಗ್ರಾಮಗಳ ಪೈಕಿ ಉಮಚಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕುಂದುಗೋಳದಲ್ಲಿ 15 ಗ್ರಾಮಗಳು, ಕಲಘಟಗಿ-54, ನವಲಗುಂದ-16, ಅಣ್ಣಿಗೇರಿ-12 ಮತ್ತು ಅಳ್ನಾವರ ತಾಲ್ಲೂಕಿನಲ್ಲಿ 9 ಗ್ರಾಮಗಳು ಸೇರಿ ಒಟ್ಟು 139 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದಾದ ಗ್ರಾಮಗಳೆಂದು ಗುರುತಿಸಲಾಗಿದೆ.