ಮಂಗಳೂರು: ಬಿಜೆಪಿ ಭದ್ರಕೋಟೆಯಾದ ಮಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ತಮ್ಮ ಭರವಸೆಗಳ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸಿದ್ದು ಮೋದಿ ಸರ್ಕರಾ ಕಳೆದ 10 ವರ್ಷಗಳಲ್ಲಿ ತಮ್ಮ ಭರವಸೆಗಳನ್ನು ಉಳಿಸಿಕೊಳ್ಳಲು ವಿಫಲರಾಗಿದ್ದರೆ, ನಾವು ಅಧಿಕಾರಕ್ಕೆ ಬಂದ ಎಂಟು ತಿಂಗಳೊಳಗೆ ಎಲ್ಲಾ ಐದು ಭರವಸೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಅಡ್ಯಾರ್‌ನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ಸುಳ್ಳುಗಾರ’ ಎಂದು ಹೇಳುವ ಮೂಲಕ ಬಿಜೆಪಿ ಮತ್ತು ಮೋದಿ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿದರು. ತೆರಿಗೆ ಹಣ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ತರಾಟೆಗೆ ತೆಗೆದುಕೊಂಡ ಅವರು, ಸ್ವಾಭಿಮಾನವಿದ್ದರೆ ಬಿಜೆಪಿಯನ್ನು ಸೋಲಿಸಿ ಎಂದು ಜನರ ಕನ್ನಡಾಭಿಮಾನಕ್ಕೆ ಚುಚ್ಚುವ ಪ್ರಯತ್ನ ಮಾಡಿದರು. ಕೇಂದ್ರಕ್ಕೆ ಪಾವತಿಸುವ ಪ್ರತಿ 1 ರೂಪಾಯಿ ತೆರಿಗೆಗೆ ರಾಜ್ಯವು ಕೇವಲ 13 ಪೈಸೆಗಳನ್ನು ಪಡೆಯುತ್ತದೆ ಎಂದು ಹೇಳಿದ ಅವರು, ರಾಜ್ಯದಿಂದ ಚುನಾಯಿತರಾದ ಬಿಜೆಪಿ ಸಂಸದರು ಈ ಬಗ್ಗೆ ಮೌನವಾಗಿದ್ದಾರೆ ಎಂದು ಆರೋಪಿಸಿದರು.