ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಕ್ಷೇತ್ರಕ್ಕೆ ಒತ್ತು ನೀಡಿದ್ದು, ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ಲಭ್ಯವಿರುವ ಅಂದಾಜು 70 ಎಕರೆ ನಿವೇಶನದಲ್ಲಿ ಅತ್ಯಾಧುನಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಛಯಗಳನ್ನು ಒಳಗೊಂಡ ಕ್ರೀಡಾ ನಗರವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದಾಗಿ ಘೋಷಿಸಿದರು.
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 4 ಸ್ಥಳಗಳಲ್ಲಿ ಬಹುಕ್ರೀಡಾ ಸೌಲಭ್ಯಗಳನ್ನೊಳಗೊಂಡ ಅತ್ಯಾಧುನಿಕ ಕ್ರೀಡಾ ಸಂಕೀರ್ಣಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು.
ರಾಜ್ಯದ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ರೈಫಲ್ ಶೂಟಿಂಗ್ ಅಸೋಸಿಯೇಶನ್, ಹಾಕಿ ಕರ್ನಾಟಕ, ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್, ಅರ್ಚರಿ ಅಸೋಸಿಯೇಶನ್, ಅಥ್ಲೆಟಿಕ್ ಅಸೋಸಿಯೇಶನ್, ಕಯಾಕಿಂಗ್ And Canoeing Academu, ಸೈಕಲಿಂಗ್ ಅಕಾಡೆಮಿ ವಿಜಯಪುರ ಹಾಗೂ ಫೆನ್ಸಿಂಗ್ ಅಸೋಸಿಯೇಶನ್ ಗಳಿಗೆ ಒಟ್ಟಾರೆ 12 ಕೋಟಿ ರೂ. ಅನುದಾನ ನೀಡಲಾಗುವುದು.
ರಾಜ್ಯದ ಕ್ರೀಡಾಪಟುಗಳಿಗೆ ಅತ್ಯುನ್ನತ ಸ್ಪರ್ಧಾ ಅವಕಾಶ ಒದಗಿಸಲು ಪ್ರತಿ ವರ್ಷ ಒಂದು ರಾಜ್ಯ ಮಟ್ಟದ ಒಲಿಂಪಿಕ್ಸ್ ಮತ್ತು 14 ವರ್ಷ ವಯೋಮಾನದ ಒಳಗಿನವರಿಗೆ ಮಿನಿ ಒಲಿಂಪಿಕ್ಸ್ ಆಯೋಜಿಸಲಾಗುವುದು.