ಬೆಂಗಳೂರು, ಫೆ.16: ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ಬಿಜೆಪಿ ಹಿರಿಯ ನಾಯಕಕೆಎಸ್ ಈಶ್ವರಪ್ಪ(KS Eshwarappa) ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಕರ್ನಾಟಕ ಹೈಕೋರ್ಟ್ (Karnataka High Court) ತಡೆ ನೀಡಿದೆ. ದೇಶ ವಿಭಜನೆ ಹೇಳಿಕೆ ನೀಡಿದ್ದ ಡಿಕೆ ಸುರೇಸ್ ವಿರುದ್ಧ ಆಕ್ರೋಶ ಹೊರಹಾಕುವ ಭರದಲ್ಲಿ ಬಿಜೆಪಿ ಹಿರಿಯ ನಾಯಕರ ಕೆಎಸ್ ಈಶ್ವರಪ್ಪ ಅವರು, ಸಂಸದ ಡಿಕೆ ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿ ರೀತಿ ದೇಶದ್ರೋಹಿ ಹೇಳಿಕೆ ನೀಡಿದವರಿಗೆ ಗುಂಡಿಕ್ಕುವ ಕಾನೂನು ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದರು.
ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿತ್ತು. ಕೆ.ಎಸ್.ಈಶ್ವರಪ್ಪ ಹೇಳಿಕೆ ವಿಚಾರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದರು. ಅಲ್ಲದೆ, ಕಾಂಗ್ರೆಸ್ ಮುಖಂಡ ಹನುಮಂತಪ್ಪ ಅವರು ನೀಡಿದ ದೂರಿನ ಅನ್ವಯ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅಲ್ಲದೆ, ಆರ್‌ಆರ್ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ಹಾಗೂ ಸಂಜಯ್ ನೀಡಿದ ದೂರಿನ ಅನ್ವಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ, ಕೆ.ಎಸ್.ಈಶ್ವರಪ್ಪ ವಿರುದ್ಧದ ಎಫ್ಐಆರ್ಗೆ ತಡೆ ನೀಡಿದ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಆಕ್ಷೇಪಾರ್ಹ ಹೇಳಿಕೆ ನೀಡುವ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಧುರೀಣರು ಉತ್ತಮ ಭಾಷೆ ಯಾಕೆ ಬಳಸುತ್ತಿಲ್ಲ? ಮಾತನಾಡುವಾಗ ಉತ್ತಮ ಸಂಸ್ಕೃತಿಯನ್ನೇಕೆ ಪ್ರತಿಬಿಂಬಿಸುವುದಿಲ್ಲ? ಹೀಗೆ ಮಾತನಾಡಿ ಭಾಷೆ ಮೇಲೆ ದೌರ್ಜನ್ಯ ಯಾಕೆ ಎಸಗುತ್ತಾರೆ ಎಂದು ಅಸಾಮಾಧಾನ ಹೊರಹಾಕಿದ್ದಾರೆ.