ಬೆಂಗಳೂರು: ಬಿಜೆಪಿ (BJP) ಅಧಿಕಾರದಲ್ಲಿ ಇದ್ದಾಗ ಬಸವರಾಜ್ ಬೊಮ್ಮಾಯಿ (Basavaraj Bommai) ಬಜೆಟ್ (budget) ಮಂಡನೆ ವೇಳೆ ಕಿವಿಗೆ ಹೂವು ಇಟ್ಟುಕೊಂಡು ಬಂದಿದ್ದ ಸಿದ್ದರಾಮಯ್ಯ (siddaramayya) ಅವರು ಈ ಬಾರಿ ರಾಜ್ಯದ ಏಳು ಕೋಟಿ ಜನರ ಕಿವಿ ಮೇಲೆ ಹೂವು ಮೂಡಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.
ಡಿ. ಕುಮಾರಸ್ವಾಮಿ ಹೇಳಿದರು.
ರಾಜ್ಯ ಬಜೆಟ್ ಕುರಿತಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ದಾಖಲೆಯ 15ನೇ ಬಜೆಟ್ ಮಂಡಿಸಿದ್ದಾರೆ. ಇದನ್ನು ನೋಡುವಾಗ ನಾಳೆ ಬಾ ಸರ್ಕಾರ ಎನ್ನುವಂತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ನಿತ್ಯವೂ ಬಯ್ಯುತ್ತಾರೆ. ಬಜೆಟ್ ನ ಪ್ರತಿ ಪುಟದಲ್ಲೂ ಬೈದಿದ್ದಾರೆ. ಸತ್ಯ ನಿರೂಪಿಸಬೇಕಾದರೆ ನೂರು ಬಾರಿ ಸುಳ್ಳು ಹೇಳು ಎಂಬ ಗಾದೆಯಂತಾಗಿದೆ ಅವರ ಪರಿಸ್ಥಿತಿ. ಅವರಿಗೆ ಜೆಡಿಎಸ್, ಬಿಜೆಪಿ, ಕೇಂದ್ರ ಸರ್ಕಾರದ ಮೇಲೆ ಮಾತ್ರ ಆಕ್ರೋಶವಿತ್ತು ಅಂದುಕೊಂಡಿದ್ದೆ. ಆದರೆ ಈ ಬಜೆಟ್ ನೋಡಿದರೆ ಅವರಿಗೆ ಕನ್ನಡಿಗರ ಮೇಲೆಯೇ ಆಕ್ರೋಶ ಇದ್ದಂತಿದೆ ಎಂದು ಹೇಳಿದರು.
ರಾಜ್ಯದ ಇತಿಹಾಸದಲ್ಲಿ ಇನ್ನು ಮುಂದೆ 15 ಬಜೆಟ್ ಮಂಡಿಸುವ ಅವಕಾಶ ಯಾರಿಗೆ ಸಿಗುತ್ತೋ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಅನುಭವ ಇದೆ. ಆದರೂ ಬಜೆಟ್ ಓದುವಾಗಲೇ ಅವರಲ್ಲಿ ವಿಶ್ವಾಸದ ಕೊರತೆ ಎದ್ದು ಕಾಣುತ್ತಿತ್ತು. ಗ್ಯಾರಂಟಿಯ ಗುಂಗಿನಿಂದ ಈ ಸರ್ಕಾರ ಇನ್ನೂ ಹೊರಗೆ ಬಂದಿಲ್ಲ ಎಂದು ದೂರಿದರು.