ಬೆಂಗಳೂರು: ನಮಗೂ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೂ ಆತ್ಮಸಾಕ್ಷಿ ಮತಗಳು ಬೀಳಲಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದು, ಅವರಿಗೆ ಆತ್ಮಸಾಕ್ಷಿಯ ಮತಗಳು ಬೀಳಲಿವೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಅವರು ಅಡ್ಡಮತದಾನದ ಕುರಿತು ನೀಡಿದ್ದ ಸೂಚನೆಗೆ ಈ ರೀತಿ ಉತ್ತರಿಸಿದರು.
ನಮಗೂ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಜೆಡಿಎಸ್ ವಿಫಲವಾಗಿರುವ ಕಾರಣದಿಂದ ಅವರು ಬಿಜೆಪಿ ಜತೆ ನೆಂಟಸ್ಥನ ಮಾಡುತ್ತಿದ್ದಾರೆ. ಆ ಪಕ್ಷಗಳಿಂದ ನಮಗೂ ಆತ್ಮಸಾಕ್ಷಿಯ ಮತಗಳು ಬರುವ ವಿಶ್ವಾಸವಿದೆ. ಬಿಜೆಪಿ ಮತ್ತು ಜೆಡಿಎಸ್ ನವರು ಸದಾ ಕುದುರೆ ವ್ಯಾಪಾರ ಮಾಡುತ್ತಾರೆ. ಅವರು ಅದಕ್ಕೆ ಹೆಸರುವಾಸಿ. ಫೆ. 27 ರಂದು ಎಲ್ಲವೂ ತಿಳಿಯಲಿದೆ. ಅವರು ಬಿಜೆಪಿಗೆ ಬಹಳ ಹತ್ತಿರವಾಗಿರುವಂತೆ ಬಿಂಬಿಸುತ್ತಿದ್ದಾರೆ. ಬಿಜೆಪಿಯ ಎಷ್ಟು ಮತಗಳು ಅವರಿಗೆ ಸಿಗಲಿದೆ ಎಂಬುದನ್ನು ಕಾದುನೋಡಿ ಎಂದು ಮಾರ್ಮಿಕವಾಗಿ ನುಡಿದರು.