ಹಂದಿಗುಂದ: ‘ಗೋದಾವರಿ ಬಯೊರಿಫೈನರಿಸ್ ಸಕ್ಕರೆ ಕಾರ್ಖಾನೆಯಿಂದ ಹೊರಮ್ಮುವ ಬೂದಿ ಹಾಗೂ ಕಲುಷಿತ ನೀರಿನಿಂದ ಬೆಳಗಾವಿ ಜಿಲ್ಲೆಯ ಗಡಿ ಭಾಗದ ಹಳ್ಳಿಗಳಲ್ಲಿ ಬೆಳೆಗಳು ಹಾಳಾಗುತ್ತಿವೆ’ ಎಂದು ರೈತರು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿದ ದೂರು ಆಧರಿಸಿ ಮಂಗಳವಾರ, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ರಾಯಬಾಗ ತಾಲ್ಲೂಕಿನ ಮರಾಕುಡಿ ಹಾಗೂ ಕಪ್ಪಲಗುದ್ದಿ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ರೈತರು ಬೆಳೆದ ಬೆಳೆಗಳ ಮೇಲೆ ಬಿದ್ದಿರುವ ಕಾರ್ಖಾನೆಯ ಬೂದಿ ಹಾಗೂ ನೀರಿನ ಪರಿಶೀಲನೆ ನಡೆಸಿದರು.
ಈ ವೇಳೆ ರೈತರ ಸಂಘ ಸಂಚಾಲಕ ಶ್ರೀಶೈಲ ಅಂಗಡಿ ಮತ್ತು ಹಳ್ಳೂರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಕತ್ತಿ ಮಾತನಾಡಿ, ‘ಬೆಳೆಗಳು ಹಾನಿಯಾಗುತ್ತಿರುವ ಬಗ್ಗೆ ಬಾಲಕೋಟೆ ಹಾಗೂ ಬೆಳಗಾವಿ ಅಧಿಕಾರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೋಗಿ ದೂರು ನೀಡಿದ್ದಾರೆ’ ಎಂದರು.