ಬೆಳಗಾವಿ: ‘ಈ ಬಾರಿ ಬಜೆಟ್‌ನಲ್ಲಿ ಬೆಳಗಾವಿ ಜಿಲ್ಲೆಯ ವಿಭಜನೆ ಘೋಷಣೆ ಆಗಲಿದೆ’ ಎಂಬ ಸುದ್ದಿ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಆದರೆ, ಯಾವುದೇ ಅಧಿಕೃತ ಮೂಲ ಇದನ್ನು ಖಚಿತಪಡಿಸಿಲ್ಲ.
‘ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಬೈಲಹೊಂಗಲ ಕೇಂದ್ರವಾಗಿ ಹೊಸ ಜಿಲ್ಲೆ ರಚಿಸಬೇಕು’ ಎಂದು ಜಿಲ್ಲಾ ಹೋರಾಟ ಸಮಿತಿ ಮನವಿ ಮಾಡಿದೆ.
ಅದೇ ರೀತಿ ಅಥಣಿ ಕೇಂದ್ರವಾಗಿ ಹೊಸ ಜಿಲ್ಲೆ ಮಾಡಬೇಕೆಂದು ಇನ್ನೊಂದು ಹೋರಾಟ ಸಮಿತಿ ಆಗ್ರಹಿಸಿದೆ. ಸಂಕೇಶ್ವರವನ್ನು ತಾಲ್ಲೂಕು ಕೇಂದ್ರ ಮಾಡುವಂತೆ ಮನವಿ ಬಂದಿವೆ. ಇವೆಲ್ಲವೂ ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಮನವಿಗಳು. ಇವುಗಳ ಪಟ್ಟಿ ಸಿದ್ಧಪಡಿಸಿ ಆಯಾ ಇಲಾಖೆಯ ಅಧಿಕಾರಿಗಳಿಗೆ ಪತ್ರ ರವಾನೆ ಮಾಡುವುದು ನಿಯಮಾವಳಿ. ಅದರಂತೆಯೇ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಇದರ ಪತ್ರ ಬಂದಿದೆ. ಆದರೆ, ಇದು ಜಿಲ್ಲೆಯ ವಿಭಜನೆ ಕುರಿತು ಸರ್ಕಾರ ಕೇಳಿದ ಮಾಹಿತಿ ಅಲ್ಲ’ ಎಂದು ಅಧಿಕಾರಿಗಳು ಖಚಿತಡಿಸಿದ್ದಾರೆ.