Breaking News

ಬೆಳಗಾವಿ ಎಪಿಎಂಸಿ ಆದಾಯ ಕುಸಿತ!

Spread the love

ಬೆಳಗಾವಿ: ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಆರಂಭ, ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ನೆರವು) ಕಾಯ್ದೆ-2020 ಜಾರಿ, ಇಳಿಕೆಯಾದ ಆವಕದ ಪ್ರಮಾಣ ಮತ್ತಿತರ ಕಾರಣದಿಂದ ಇಲ್ಲಿನ ಎಪಿಎಂಸಿ ಆದಾಯ ಕುಸಿಯುತ್ತಿದೆ.

2021-22ರಲ್ಲಿ ‘ಸೆಸ್‌’ ರೂಪದಲ್ಲಿ ₹4.07 ಕೋಟಿ ಆದಾಯ ಎಪಿಎಂಸಿಗೆ ಬಂದಿತ್ತು.

2022-23ರಲ್ಲಿ ಅದು ₹3.70 ಕೋಟಿಗೆ ಇಳಿಕೆಯಾಗಿತ್ತು. ಪ್ರಸಕ್ತ ವರ್ಷ(2023ರ ಏಪ್ರಿಲ್‌ 1ರಿಂದ 2024ರ ಫೆ.13ರವರೆಗೆ) ₹3.02 ಕೋಟಿಗೆ ಆದಾಯ ಸಂಗ್ರಹವಾಗಿದೆ. ಈಗ ಬರುತ್ತಿರುವ ಆದಾಯದಲ್ಲಿ ಎಪಿಎಂಸಿಗಳ ನಿರ್ವಹಣೆಗೆ ಕಷ್ಟವಾಗುತ್ತಿದೆ. ಜತೆಗೆ, ಹೊಸದಾಗಿ ಯಾವ ಕಾಮಗಾರಿ ಕೈಗೊಳ್ಳಲು ಹಣವೇ ಇಲ್ಲದಂತಾಗಿದೆ.

84 ಎಕರೆ ವಿಸ್ತೀರ್ಣದಲ್ಲಿರುವ ಬೆಳಗಾವಿ ಎಪಿಎಂಸಿ ಪ್ರಾಂಗಣದಲ್ಲಿ ಹಲವು ವರ್ಷಗಳಿಂದಲೂ ಈರುಳ್ಳಿ, ಆಲೂಗಡ್ಡೆ ಮತ್ತು ಗೆಣಸು ಮಾರಾಟ ಮಾಡಲಾಗುತ್ತಿದೆ. ಇದೇ ಪ್ರಾಂಗಣದಲ್ಲಿ ಹೊಸ ತರಕಾರಿ ಮಾರುಕಟ್ಟೆ ತಲೆ ಎತ್ತಿತು. ದಂಡು ಮಂಡಳಿ ವ್ಯಾಪ್ತಿಯಲ್ಲಿದ್ದ ಹಳೆಯ ಸಗಟು ತರಕಾರಿ ಮಾರುಕಟ್ಟೆಯನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. 2019-20ರಲ್ಲಿ ಕೆಲ ತಿಂಗಳು ಇಲ್ಲಿಯೇ ತರಕಾರಿಯ ವ್ಯಾಪಾರ-ವಹಿವಾಟು ನಡೆದಿತ್ತು. ಕೊರೊನಾ ವಕ್ಕರಿಸಿದ್ದರಿಂದ ವಹಿವಾಟು ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಕೊರೊನಾ ಹಾವಳಿ ತಗ್ಗಿದ್ದರಿಂದ 2021-22ರಲ್ಲಿ 9 ತಿಂಗಳು ಮತ್ತೆ ತರಕಾರಿ ಮಾರಾಟಗೊಂಡಿತ್ತು.

ಆದರೆ, 2022ರ ಜನವರಿಯಲ್ಲಿ ಬೆಳಗಾವಿಯಲ್ಲೇ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಆರಂಭಗೊಂಡ ನಂತರ, ಎಪಿಎಂಸಿಯಲ್ಲಿ ವಹಿವಾಟು ನಡೆಸುತ್ತಿದ್ದ ಹೆಚ್ಚಿನ ವ್ಯಾಪಾರಸ್ಥರು ಅತ್ತ ಮುಖಮಾಡಿದ್ದಾರೆ. ಹಾಗಾಗಿ ಸದ್ಯ ಎಪಿಎಂಸಿಯಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಒಂದಿಷ್ಟು ರಿಟೇಲ್‌ ವ್ಯಾಪಾರ ನಡೆಯುತ್ತಿರುವುದು ಬಿಟ್ಟರೆ, ವಹಿವಾಟು ಸಂಪೂರ್ಣ ಕುಸಿದಿದೆ. ಸದಾ ರೈತರು, ವ್ಯಾಪಾರಸ್ಥರಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆ ಈಗ ಜನರಿಲ್ಲದೆ ಬಿಕೋ ಎನ್ನುತ್ತಿದೆ.

90 ಮಳಿಗೆ ಹಂಚಿಕೆಯಾಗಿವೆ: ‘ಎಪಿಎಂಸಿಯ ತರಕಾರಿ ಮಾರುಕಟ್ಟೆಯಲ್ಲಿ 250 ಮಳಿಗೆಗಳಿವೆ. ಈ ಪೈಕಿ 90 ಮಾತ್ರ ಹಂಚಿಕೆಯಾಗಿವೆ. ಈ ಪೈಕಿ ಎಲ್ಲ ಮಳಿಗೆಗಳೂ ಬಳಕೆಯಾಗುತ್ತಿಲ್ಲ. ಸಗಟು ತರಕಾರಿ ವ್ಯಾಪಾರವೂ ಇಲ್ಲಿ ನಡೆಯುತ್ತಿಲ್ಲ. ಕೆಲವು ಗ್ರಾಹಕರು ಬಂದು, ರಿಟೇಲ್‌ ರೂಪದಲ್ಲಿ ತರಕಾರಿ ಖರೀದಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ