ಹಾವೇರಿ, : ಜಿಲ್ಲೆಯ ಹಾನಗಲ್(Hangal) ತಾಲೂಕಿನ ಮಲಗುಂದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದರು. ರಾತ್ರಿಯಿಡೀ ಗ್ರಾಮದಲ್ಲಿ ಸಂಭ್ರಮದಿಂದ ದುರ್ಗಮ್ಮ ದೇವಿ ಜಾತ್ರೆ ಮಾಡಿ ಮಲಗಿದ್ದ ಜನರಿಗೆ ಬೆಳಗ್ಗೆ ಗ್ರಾಮದಲ್ಲಿ ವ್ಯಕ್ತಿಯ ಕೊಲೆಯಾಗಿದೆ ಎನ್ನುವ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದರು. ಹೀಗೆರಕ್ತದ ಮಡುವಿನಲ್ಲಿಹೆಣವಾಗಿ ಮಲಗಿರುವ ವ್ಯಕ್ತಿಯ ಹೆಸರು ಯಲ್ಲಪ್ಪ ದೊಡ್ಡಕೋವಿ. ಮದುವೆಯಾಗಿ ಹೆಂಡತಿ ಮಕ್ಕಳು ಇದ್ದರೂ ಕೂಡ ಏಕಾಂಗಿಯಾಗಿ ಗ್ರಾಮದಲ್ಲಿ ವಾಸವಾಗಿದ್ದ. ಇತನಿಗೆ ಅಣ್ಣಾ ಹಜಾರೆ ಎಂದು ಗ್ರಾಮದ ಜನರು ಕರೆಯುತ್ತಿದ್ದರು. ಆದರೆ, ಆರೋಪಿ ಪಕ್ಕಿರಪ್ಪ ದೊಡ್ಡಕೋವಿ, ಮೃತ ಯಲ್ಲಪ್ಪನಿಗೆ ಚಿಕ್ಕಪ್ಪನಾಗಬೇಕು. ಆರು ತಿಂಗಳ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಜಗಳ ಮಾಡಿಕೊಂಡಿದ್ದರು. ಇದನ್ನೆ ಮನಸಿನಲ್ಲಿ ಇಟ್ಟುಕೊಂಡು ಇತ ನಿನ್ನೆ(ಫೆ.13) ಯಾರು ಇಲ್ಲದಿರುವಾಗ ಇಟ್ಟಿಗೆಯಿಂದ ಜಜ್ಜಿ ಕೊಲೆ ಮಾಡಿದ್ದಾನೆ.
ಮನೆಯವರು ಎಲ್ಲರೂ ದೇವಸ್ಥಾನಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಪಕ್ಕಿರಪ್ಪ, ಮನೆಯ ಜಗುಲಿ ಮುಂದೆ ಮಲಗಿದ್ದ. ಯಲ್ಲಪನನ್ನು ಕಂಡು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾನೆ. ಮೊದಲೇ ಕುಡಿದಿದ್ದ ಪಕ್ಕಿರಪ್ಪ, ಮತ್ತೆ ಸ್ವಲ್ಪ ಕುಡಿದು ಬಂದು ಮಲಗಿದ್ದ ಯಲ್ಲಪ್ಪನಿಗೆ ಇಟ್ಟಿಗೆಯಿಂದ ತಲೆಗೆ ಹೊಡೆದು ಆತನ ಉಸಿರು ನಿಲ್ಲಿಸಿದ್ದಾನೆ. ಇಷ್ಟಾದರೂ ಅಣ್ಣನ ಮಗನ ಕೊಲೆ ಮಾಡಿದ ಕಿರಾತಕ, ದುರ್ಗಾದೇವಿ ಜಾತ್ರೆಯ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ಆದರೆ, ಸುದ್ದಿ ತಿಳಿದು ಸ್ಥಳಕ್ಕೆ ಬಂದ ಆಡೂರು ಪೊಲೀಸರು, ಪಕ್ಕಿರಪ್ಪನ ಕೈ ಅಂಟಿರುವ ರಕ್ತದ ವಾಸನೆ ಹಿಡಿದು ಹೆಡೆಮುರಿ ಕಟ್ಟಿದ್ದಾರೆ.