ಯಮಕನಮರಡಿ: ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡ ಮಾಸ್ತಿಹೊಳಿ ಗ್ರಾಮದ ರೈತರಿಗೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ, ರೈತ ಮಹಿಳೆಯರು ಸೋಮವಾರ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದರು.
’50 ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಡುತ್ತಿದ್ದೇವೆ. ಬೇಗ ಪರಿಹಾರ ಕೊಡಿ; ಇಲ್ಲದಿದ್ದರೆ ಸಾಯಲು ಬಿಡಿ.
ನೀರಾವರಿ ಇಲಾಖೆಯ ಅಧಿಕಾರಿಗಳ ಹೆಸರು ಬರೆದಿಟ್ಟು ನಾವೆಲ್ಲ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದೂ ಮಹಿಳೆಯರು ಜಮೀನು ಸರ್ವೆಗೆ ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಈ ಗ್ರಾಮದ ಸರ್ವೆ ಸಂಖ್ಯೆ 116 ಹಾಗೂ 118ರಲ್ಲಿ ಬರುವ ಹಲವು ರೈತರ ಜಮೀನು ನೀರುಪಾಲಾಗಿದೆ. ಆದರೆ, ನೀರಾವರಿ ಇಲಾಖೆಯ ಅಧಿಕಾರಿಗಳು ತಪ್ಪು ವರದಿ ನೀಡಿದ ಕಾರಣ ನಮಗೆ ಅನ್ಯಾಯವಾಗಿದೆ. ಅಣೆಕಟ್ಟೆ ನಿರ್ಮಾಣವಾಗಿ 50 ವರ್ಷಗಳು ಕಳೆದರೂ ಪರಿಹಾರ ಸಿಕ್ಕಿಲ್ಲ’ ಎಂದು ಆರೋಪಿಸಿ ರೈತರು ಈಚೆಗೆ ಹೋರಾಟ ನಡೆಸಿದ್ದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಮಾಸ್ತಿಹೊಳಿ, ಗ್ರಾಮದ ಮುಳುಗಡೆ ಪ್ರದೇಶವನ್ನು ಮರು ಸರ್ವೆ ಮಾಡುವಂತೆ ಆದೇಶ ನೀಡಿದ್ದಾರೆ. ಸರ್ವೆ ನಡೆಸಲು ಸೋಮವಾರ ಹೊಲಕ್ಕೆ ಬಂದ ಅಧಿಕಾರಿಗಳನ್ನು ರೈತ ಮಹಿಳೆಯರು ಮುತ್ತಿಗೆ ಹಾಕಿದರು. ಕೈಯಲ್ಲಿ ಕೀಟನಾಶಕ ಡಬ್ಬಿಗಳನ್ನು ಹಿಡಿದುಕೊಂಡು ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದರು.
‘ಈ ಎರಡು ಸರ್ವೆಗಳಲ್ಲಿ ಬರುವ ಹಲವಾರು ರೈತರ ಜಮೀನು ಹಿಡಕಲ್ ಜಲಾಶಯದ ಹಿನ್ನೀರಿನ ಮುಳಗಡೆ ಆಗಿಲ್ಲ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ಈ ಹಿಂದೆ ಸರ್ವೆಗೆ ಬಂದ ಅಧಿಕಾರಿಗಳು ರೈತರಿಂದ ಮಾಹಿತಿಯನ್ನೇ ಪಡೆದಿಲ್ಲ. ಮನಸ್ಸಿಗೆ ಬಂದಂತೆ ವರದಿ ನೀಡಿದ್ದಾರೆ. ಹೋರಾಟ ಮಾಡಿ ಸಾಕಾಗಿದೆ. ಫೆ.28ರ ನಂತರ ಅಧಿಕಾರಿಗಳ ಮನೆಯ ಮುಂದೆ ವಿಷದ ಬಾಟಲಿ ತಗೆದುಕೊಂಡು ಬರುತ್ತೇವೆ. ಅಲ್ಲಿಯೇ ಸಾವಿಯುತ್ತೇವೆ’ ಎಂದು ರೈತ ಮಹಿಳೆಯರು ಹಿಡಕಲ್ ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿ ತಾಳೂರ, ಅಧಿಕಾರಿ ಎಂ.ಎಸ್.ಮಾಡಿವಾಲೆ ಹಾಗೂ ಸರ್ವೆಗೆ ಬಂದ ಸಿಬ್ಬಂದಿ ವಿರುದ್ದ ಹರಿಹಾಯ್ದರು.
‘ಈಗ ಮತ್ತೆ ಸರ್ವೆ ಮಾಡಲಾಗುತ್ತಿದೆ. ನಾವು ಇಷ್ಟು ವರ್ಷ ಸಂಕಷ್ಟ ಎದುರಿಸಿದ್ದೇವೆ. ಜಮೀನಿನ ಹೊಸ ದರದಂತೆ ನಮಗೆ ಪರಿಹಾರ ನೀಡಬೇಕು. ದಶಕಗಳ ಹಿಂದಿನಂತೆ ಬಿಡಿಗಾಸು ನೀಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ರೈತ ಮುಖಂಡ ಬಾಳೇಶ ಮಾವನೂರಿ ಎಚ್ಚರಿಸಿದರು.