ಉತ್ತರ ಕನ್ನಡ, ಫೆ.13: ಬುರ್ಖಾ ಧರಿಸಿಕೊಂಡು ಬಂದ ಮಹಿಳೆಯರ ಗ್ಯಾಂಗ್ ಚಿನ್ನ ಕಳ್ಳತನ ಮಾಡಿದ ಘಟನೆ ಹಳಿಯಾಳ (Haliyal)ದ ಶ್ರೀ ಪೇಟೆ ಬಸವೇಶ್ವರ ಅಂಗಡಿ ಸಂಕೀರ್ಣದಲ್ಲಿ ನಡೆದಿದೆ.
ಬಂಗಾರ ಮತ್ತು ಬೆಳ್ಳಿಯ ಉಂಗುರ ಖರೀದಿಸುವ ಸೋಗಿನಲ್ಲಿ ಬುರ್ಖಾ ಧರಿಸಿದ 3 ಮಹಿಳೆಯರು ಹಾಗೂ ಮಾಸ್ಕ್ ಧರಿಸಿದ ಒಬ್ಬ ಯುವಕ ಆಗಮಿಸಿದ್ದರು.

ಈ ವೇಳೆ ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದು, ಕೌಂಟರ್‌ನಲ್ಲಿದ್ದ 366 ಗ್ರಾಂ.ಚಿನ್ನಾಭರಣಹಾಗೂ ಗ್ರಾಹಕರಿಂದ ದುರಸ್ತಿಗಾಗಿ ಬಂದಿದ್ದ 50 ಗ್ರಾಂ ಚಿನ್ನ ಸೇರಿದಂತೆ ಒಟ್ಟು 22 ಲಕ್ಷಕ್ಕೂ ಅಧಿಕ ಮೌಲ್ಯದ 416 ಗ್ರಾಂ. ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದಾರೆ.
ಸುಮಾರು ಅರ್ಧ ಗಂಟೆ ಬಳಿಕ ಸಂಶಯಗೊಂಡ ಅಂಗಡಿ ಮಾಲಿಕ, ಕೌಂಟರ್ ಕೆಳಭಾಗದಲ್ಲಿ ಚಿನ್ನಾಭರಣ ತುಂಬಿದ ಡಬ್ಬದ ಹುಡುಕಾಟ ನಡೆಸಿದಾಗ ಡಬ್ಬ ಮಾಯವಾಗಿತ್ತು. ತಕ್ಷಣ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಬುರ್ಖಾಧಾರಿ ಮಹಿಳೆಯರ ಕೃತ್ಯ ಬೆಳಕಿಗೆ ಬಂದಿದೆ.
ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಕುರಿತು ಕಾರವಾರ ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ.
Laxmi News 24×7