ಬೆಂಗಳೂರು, (ಫೆಬ್ರವರಿ 13): ಮಂಡ್ಯ ಲೋಕಸಭಾ (Mandya LokaSaba) ಕ್ಷೇತ್ರ ಈ ಬಾರಿ ಮತ್ತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಬಹುತೇಕ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ (HD Devegowda)ಅವರು ಇಂದು(ಫೆಬ್ರವರಿ 13) ತಮ್ಮ ಬೆಂಗಳೂರಿನ ನಿವಾಸದಲ್ಲಿ ಮಂಡ್ಯ ಜಿಲ್ಲಾ ಜೆಡಿಎಸ್ ನಾಯಕರ ಸಭೆ ನಡೆಸಿದ್ದು, ಅಭ್ಯರ್ಥಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅಲ್ಲದೇ ಯಾರು ಅಭ್ಯರ್ಥಿಯಾದರೆ ಹೇಗೆ ಎನ್ನುವ ಸಾಧಕ-ಬಾಧಕಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡ ದೇವೇಗೌಡ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕುಮಾರಸ್ವಾಮಿ, ನನಗೆ( ದೇವೇಗೌಡ) ನಿಖಿಲ್ಗೆ ಒತ್ತಾಯವಿದೆ. ಆದ್ರೆ, ನಾನು ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ. ಹಾಗೇ ಈಗಾಗಲೇ ನಿಖಿಲ್ ಸಹ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಮೂವರಲ್ಲಿ ಇಬ್ಬರು ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಮೇಲೆ ಕೊನೆಯದಾಗಿ ಕುಮಾರಸ್ವಾಮಿ ಉಳಿದಿದ್ದು, ಅವರೇ ಮಂಡ್ಯ ಜೆಡಿಎಸ್ ಅಭ್ಯರ್ಥಿಯಾಗುವುದು ನಿಶ್ಚಿತವಾಗಿದೆ. ದೇವೇಗೌಡರ ಮಾತಿನ ಹಿಂದಿನ ಮರ್ಮವೂ ಸಹ ಅದೇ ಆಗಿದೆ, ಆದ್ರೆ, ಅವರು ಬಹಿರಂಗಪಡಿಸಲಿಲ್ಲ ಅಷ್ಟೇ.
ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಓಡಾಡಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಕಾರ್ಯಕರ್ತರೊಂದಿಗೆ ಸಭೆ ಮಾಡಿ ಮಾತಾಡಿದ್ದಾರೆ. ಈ ಸಭೆಯಲ್ಲಿ ನಾವು ಮೂವರಲ್ಲಿ ಒಬ್ಬರು ನಿಲ್ಲಿ ಅಂದಿದ್ದಾರೆ. ಆದ್ರೆ, ನಾನು ನಿಲ್ಲಲ್ಲ. ನಿಖಿಲ್ ಕೂಡ ನಿಲ್ಲಲ್ಲ. ಕುಮಾರಸ್ವಾಮಿ ಅವರು ಇವತ್ತು ಸಭೆಯಲ್ಲಿ ಇರಲಿಲ್ಲ. ಅಂತಿಮವಾಗಿ ಲೋಕಸಭೆ ಬಗ್ಗೆ ನಾವು ಒಂದು ಅಭಿಪ್ರಾಯ ತಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.