ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಹುಳಿ ಖಾರ ಏನೂ ಇಲ್ಲ. ಇದೊಂದು ಜಾಹೀರಾತುಗಳಿಂದ ನಡೆಯುತ್ತಿರುವ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಡೆ ಬರಗಾಲ, ಕೇಂದ್ರ ಸರ್ಕಾರದಿಂದ ಹಣ ಬರುತ್ತಿಲ್ಲ ಎನ್ನುವ ಸರ್ಕಾರ ಇಲ್ಲಿ ನೋಡಿದರೆ ಗಂಜಿ ಕೇಂದ್ರಗಳನ್ನು ಸೃಷ್ಟಿ ಮಾಡಿ 90 ಮಂದಿಗೆ ಸಂಪುಟ ದರ್ಜೆ ನೀಡಿದೆ.
ಅದರಲ್ಲಿ 77 ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ನೀಡಿದ್ದರೆ, ಸಿಎಂ ಕಚೇರಿಯಲ್ಲಿ 9 ಜನರಿಗೆ ಸಂಪುಟ ಭಾಗ್ಯ ಕರುಣಿಸಲಾಗಿದೆ ಎಂದರು.
ರಾಜ್ಯದ ಆಡಳಿತಾತ್ಮಕ ಇತಿಹಾಸದಲ್ಲಿಯೂ ಇಷ್ಟು ಬೇಕಾಬಿಟ್ಟಿಯಾಗಿ ಅಧಿಕಾರ ಹಂಚಿಕೆ ಮಾಡಿ ಖಜಾನೆಗೆ ನಷ್ಟ ಉಂಟು ಮಾಡಲಾಗಿದೆ ಎಂದು ಅವರು ದೂರಿದರು.
ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಲಾದ ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಕ್ಯಾಬಿನೆಟ್ ದರ್ಜೆ ಅದಕ್ಕೊಂದು ಲೆಕ್ಕ ಬೇಡವೇ? ಉಪ ಮುಖ್ಯಮಂತ್ರಿ ಅವರ ಆರೋಗ್ಯ ತಪಾಸಣೆ ಮಾಡುವ ವೈದ್ಯರಿಗೂ ಕ್ಯಾಬಿನೆಟ್ ದರ್ಜೆ! ಕಲೆಕ್ಷನ್ ಮಾಡಿಕೊಡುವ ಅಸಾಮಿಗೂ ಕ್ಯಾಬಿನೆಟ್ ದರ್ಜೆ!! ಕರ್ನಾಟಕ ಹಣಕಾಸು ಸಂಸ್ಥೆ (KSFC) ಅಧ್ಯಕ್ಷರನ್ನಾಗಿ ಶಾಸಕರನ್ನು ನೇಮಕ ಮಾಡುತ್ತಿರುವುದು ಉಂಟಾ? ಎಂದು ಸರಕಾರವನ್ನು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಬರಕ್ಕೆ ತುತ್ತಾದ ರೈತರಿಗೆ ಪರಿಹಾರ ಕೊಡಲು ಇವರಲ್ಲಿ ಹಣವಿಲ್ಲ. ಆದರೆ, ಸಂಪುಟ ದರ್ಜೆ ಭಾಗ್ಯಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದನ್ನು ಏನೆಂದು ಕರೆಯಬೇಕು? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.