ಮೈಸೂರು, : ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಬಳಿಕ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸುತ್ತಿದ್ದು, ಇಂದು ರಾತ್ರಿ ಬಿಜೆಪಿ ಚಾಣಕ್ಯ ಎಂದೇ ಹೆಸರಾಗಿರುವ ಕೇಂದ್ರ ಗೃಹಸಚಿವಅಮಿತ್ ಶಾ(Amit Shah) ಅವರು ಮೈಸೂರಿಗೆ ಆಗಮಿಸಲಿದ್ದು, ನಾಳೆ ಮಹತ್ವದ ಸಭೆ ನಡೆಯಲಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ವಿಜಯೇಂದ್ರ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಳಿನ ಸಭೆ ಮಹತ್ವದ್ದಾಗಿದೆ. ಸಭೆಯಲ್ಲಿ ಬಿಜೆಪಿಯ ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ. ಆದರೆ ಶಿವಮೊಗ್ಗದಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮ ಇರುವ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಭಾಗಿಯಾಗುತ್ತಿಲ್ಲ ಎಂದರು.
ಮಂಡ್ಯ ಕ್ಷೇತ್ರ ಸಹ ನಮಗೆ ಮಹತ್ವವಾದ್ದಾಗಿದೆ ಎಂದ ವಿಜಯೇಂದ್ರ, ನಾಳಿನ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವಿಚಾರ ಚರ್ಚೆ ಆದರೂ ಆಗಬಹುದು. ಉಳಿದಂತೆ, ಟಿಕೆಟ್ ಆಕಾಂಕ್ಷಿಗಳ ಕುರಿತು ಯಾವುದೇ ಚರ್ಚೆ ಇರುವುದಿಲ್ಲ. ಈಗಾಗಲೇ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ವರಿಷ್ಠರ ಬಳಿ ಮಾಹಿತಿ ಇದ್ದು, ವರಿಷ್ಠರು ಸೂಕ್ತ ಕಾಲದಲ್ಲಿ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದರು.