ಬೆಂಗಳೂರು, : ಬೆಲೆ ಏರಿಕೆ ನಡುವೆ ಕೇಂದ್ರದ ಬಿಜೆಪಿ ಸರ್ಕಾರವು ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆ 29 ರೂಪಾಯಿಗೆ ಭಾರತ್ ಅಕ್ಕಿ (Bharat Rice) ಯೋಜನೆಗೆ ಚಾಲನೆ ನೀಡಿದ್ದು, ದೇಶದದ್ಯಾಂತ ಲಭ್ಯವಿದೆ. ಕೇಂದ್ರ ಸರ್ಕಾರ ಪಡಿತರ ಹಂಚಿಕೆಗೆ ಇಟ್ಟಿದ್ದ ಅಕ್ಕಿಯನ್ನು ಕೆಜಿಗೆ 29ರೂ ನಂತೆ ಮಾರಾಟಕ್ಕಿಟ್ಟಿದೆ ಎಂದು ಕಾಂಗ್ರೆಸ್ (Congress) ಟೀಕಿಸಿತ್ತು. ಇದಕ್ಕೆ ತಿರುಗೇಟು ನೀಡಿದಬಿಜೆಪಿ (BJP),ಮೋದಿ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ ನೀಡುತ್ತಿದೆ ಎಂದು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ, ಮೋದಿ ಸರ್ಕಾರ ಅತ್ಯಂತ ಕಡಿಮೆ ಬೆಲೆಗೆ ಅಕ್ಕಿ ನೀಡುತ್ತಿದೆ ಎಂಬುದನ್ನು ಕೊನೆಗೂ ಒಪ್ಪಿಕೊಂಡ ನಿಮಗೆ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು. ಆದರೆ ನಿಮ್ಮ ಟ್ವೀಟ್‌ನಲ್ಲಿ ಒಂದೇ ಒಂದು ವ್ಯತ್ಯಾಸವಿದೆ ದಯವಿಟ್ಟು ಸರಿಪಡಿಸಿಕೊಳ್ಳಿ. ನೀವು ಹೇಳಿದ 10ಕೆಜಿ ಅಕ್ಕಿಯಲ್ಲಿ ಒಂದು ಮುಷ್ಟಿ ಅಕ್ಕಿ ಸಹ ಇದುವರೆಗೂ ಕರ್ನಾಟಕದ ಜನತೆಗೆ ತಲುಪಿಲ್ಲ ಎಂದು ಹೇಳಿದೆ.
ಪ್ರಸ್ತುತ ಕರ್ನಾಟಕದ ಜನತೆಗೆ ಅನ್ನಭಾಗ್ಯದಲ್ಲಿ ದೊರೆಯುತ್ತಿರುವ 5 ಕೆಜಿ ಸಹ ಮೋದಿ ಸರ್ಕಾರ ನೀಡುತ್ತಿರುವ ಅಕ್ಕಿ, ಅದಕ್ಕೆ ನೀವು ಲೇಬಲ್ ಅಂಟಿಸಿಕೊಂಡಿದ್ದೀರಿ ಅಷ್ಟೇ. ಒಟ್ಟಾರೆ ಕರ್ನಾಟಕದ ಜನತೆಗೆ ನಿಮ್ಮ ಕೊಡುಗೆ ಶೂನ್ಯ, ಶೂನ್ಯ, ಶೂನ್ಯ ಎಂದು ಬಿಜೆಪಿ ಹೇಳಿದೆ.