ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ರಾಜ್ಯದ ಜೈನ ಸಮುದಾಯದ ಏಳ್ಗೆಗಾಗಿ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇದಕ್ಕಾಗಿ ನಾನು ಸಲ್ಲೇಖನ ವೃತ ಕೈಗೊಂಡು ಪ್ರಾಣತ್ಯಾಗಕ್ಕೂ ಸಿದ್ಧ’ ಎಂದು ಆಚಾರ್ಯ ಗುಣಧರನಂದಿ ಮಹಾರಾಜ ಹೇಳಿದರು.
ತಾಲ್ಲೂಕಿನ ಶಮನೇವಾಡಿಯಲ್ಲಿ ತಮ್ಮ 33ನೇ ದೀಕ್ಷಾ ಜಯಂತಿ ಪ್ರಯುಕ್ತ ಗುರುವಾರ ನಡೆದ ಜೈನ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಜೈನರ ಸಮಸ್ಯೆಗಳ ನಿವಾರಣೆಗೆ ಮುಂದಾಗುವ ನಾಯಕರಿಗೆ ನಿಮ್ಮ ಮತ ನೀಡಿ.
ಇನ್ನುಳಿದ ಧರ್ಮಗಳ ಮೇಲೆ ಗೌರವ ಇರಲಿ. ಜೈನ ಧರ್ಮದ ಮೇಲೆ ಅಭಿಮಾನವಿರಲಿ’ ಎಂದರು.
‘ಜೈನ ಧರ್ಮೀಯರಿಗಾಗಿ ನಿಗಮ ಮಂಡಳಿ, ವಸತಿ ನಿಲಯ ಸ್ಥಾಪನೆ ಸೇರಿ ವಿವಿಧ ಸೌಲಭ್ಯಗಳಿಗಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲೂ ಸಿದ್ದ’ ಎಂದರು.
ಮಾಜಿ ಸಚಿವ ವೀರಕುಮಾರ ಪಾಟೀಲ ಮಾತನಾಡಿ,’ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 2.80 ಲಕ್ಷ ಜೈನ ಮತದಾರರು ಇದ್ದಾರೆ. ಸರ್ಕಾರ ಇದನ್ನು ಗಮನಿಸಿ ಜೈನ ಅಭಿವೃದ್ಧಿ ನಿಗಮ ಸೇರಿ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು’ ಎಂದರು.
Laxmi News 24×7