ಬೆಂಗಳೂರು: ಊಟ ಮಾಡೋದು, ಬಟ್ಟೆ ಹಾಕೋಳುದು, ತಿಂಡಿ ತಿನ್ನೋದರ ಬಗ್ಗೆ ಮಾತಾಡೋಕೆ ಆಗುತ್ತಾ ಅವೆಲ್ಲಾ ಸಿಲ್ಲಿ ಪ್ರಶ್ನೆಗಳು ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಷಯದ ಕುರಿತು ಜನಸ್ಪಂದನ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಊಟ ಮಾಡೋದು, ಬಟ್ಟೆ ಹಾಕೋಳುದು, ತಿಂಡಿ ತಿನ್ನೋದರ ಬಗ್ಗೆ ಮಾತಾಡೋಕೆ ಆಗುತ್ತಾ ಅವೆಲ್ಲಾ ಸಿಲ್ಲಿ ಪ್ರಶ್ನೆಗಳು.
ಈ ದೇಶದ ಬಡವರ ಬಗ್ಗೆ, ಬೆಲೆ ಏರಿಕೆ, ನಿರುದ್ಯೋಗಿಗಳ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಅದನ್ನ ಬಿಟ್ಟು ಇಂಥ ತಿಂಡಿ ತಿಂದ್ರು, ಇಂಥ ಊಟ ಮಾಡಿದ್ರು, ಇಂಥ ಬಟ್ಟೆ ಹಾಕಿಕೊಂಡಿದ್ರು ಅಂಥಾ ಮಾತಾಡೋದಾ? ಇಂಥ ಪ್ರಶ್ನೆಗಳನ್ನು ನನಗೆ ಕೇಳಬೇಡಿ ಎಂದು ಅಸಾಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿದ್ದು, ಭಕ್ತನಿಗೂ ಭಗವಂತನ ಸಂಬಂಧ ವೈಯಕ್ತಿಕವಾದದ್ದು. ಅದರಿಂದ ಅವರಿಗ್ಯಾಕೆ ಹೊಟ್ಟೆಯೂರಿ. ಬಿಜೆಪಿಯವರು ನಿನ್ನೆ ಮೊನ್ನೆ ಅಧಿಕಾರಕ್ಕೆ ಬಂದವರು. ಕಳೆದ 10 ವರ್ಷದಿಂದ ಆಡಳಿತ ನಡೆಸಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ಅದಕ್ಕೂ ಮೊದಲೇ ಇತ್ತು ಎಂದು ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದರು.
ನಿನ್ನೆ ಸಿದ್ದರಾಮಯ್ಯ ದೆಹಲಿಯಲ್ಲಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅಲ್ಲಿ ಮಧ್ಯಾಹ್ನ ಮಾಂಸದ ಊಟ ಮಾಡಿ ವಿಮಾನದಲ್ಲಿ ಬಂದು ನೇರವಾಗಿ ಸುತ್ತೂರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಹೀಗೆ ಮಾಂಸದೂಟ ಮಾಡಿದ ಬೆನ್ನಿಗೇ ಸುತ್ತೂರು ಜಾತ್ರೆಯಲ್ಲಿ ಭಾಗಿಯಾಗಿದ್ದು, ಗದ್ದುಗೆ ಭೇಟಿ ಮಾಡಿದ ವಿಚಾರ ಮತ್ತೆ ಸಿದ್ದರಾಮಯ್ಯ ಅವರ ಕೊರಳಿಗೆ ಸುತ್ತಿಕೊಂಡಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Laxmi News 24×7