ಹೊಸದಿಲ್ಲಿ: “ನಾನು ಬಿಜೆಪಿಗೆ ಸೇರಬೇಕು ಎಂದು ಆಹ್ವಾನ ನೀಡುತ್ತಿದ್ದಾರೆ. ಆದರೆ ನಾನು ಹೋಗುವುದೇ ಇಲ್ಲ’ ಹೀಗೆಂದು ದಿಲ್ಲಿ ಸಿಎಂ ಮತ್ತು ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಬಿಜೆಪಿಗೆ ಸವಾಲು ಹಾಕಿದ್ದಾರೆ. ಪಕ್ಷದ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿರುವಂತೆಯೇ ಅವರು ಈ ಮಾತುಗಳನ್ನಾಡಿದ್ದಾರೆ.
ಹೊಸದಿಲ್ಲಿಯ ಕಿರಾರಿ ಎಂಬಲ್ಲಿ ಶಾಲೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಕೇಜ್ರಿವಾಲ್ ಮಾತನಾಡಿದರು. “ಅವರು (ಬಿಜೆಪಿ) ನನ್ನ ವಿರುದ್ಧ ಏನೂ ಕ್ರಮಗಳನ್ನು ಬೇಕಾದರೂ ಮಾಡಬಹುದು. ಆದರೆ ಏನು ಮಾಡಲು ಕೂಡ ಸಾಧ್ಯವಿಲ್ಲ,. ನಾನು ಅವರ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ನಾನು ಬಿಜೆಪಿ ಸೇರಬೇಕು ಎಂಬ ಬಗ್ಗೆ ಆಹ್ವಾನದ ಜತೆಗೆ ಒತ್ತಡವನ್ನೂ ಹೇರುತ್ತಿದ್ದಾರೆ. ಆದರೆ ಅದಕ್ಕೆ ಮಣಿದು ಸೇರುವ ಪ್ರಶ್ನೆಯೇ ಇಲ್ಲ’ ಎಂದು ಸವಾಲು ಹಾಕಿದ್ದಾರೆ. ಯಾವ ಅಪರಾಧವನ್ನು ನಾವು ಮಾಡಿದ್ದೇವೆ ಎಂಬ ಕಾರಣಕ್ಕಾಗಿ ಬಿಜೆಪಿಯವರು ನಮ್ಮನ್ನು ಕ್ಷಮಿಸಬೇಕು ಎಂದು ಪ್ರಶ್ನಿಸಿದ್ದಾರೆ ದಿಲ್ಲಿ ಸಿಎಂ.
ಬಂಧನಕ್ಕೆ ಒಳಗಾದರೂ ನಿಲ್ಲದು: ಯಾವುದಾದರೂ ಒಂದು ರೀತಿಯಲ್ಲಿ ತಮ್ಮ ಬಂಧನ ಆದರೂ ಕೂಡ ದಿಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಅಭಿವೃದ್ಧಿ ಯೋಜನೆಗಳು ನಿಲ್ಲಲಾರವು ಎಂದು ಸವಾಲು ಹಾಕಿದ್ದಾರೆ. ಜನಸಾಮಾನ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡಿರುವ ಮೊಹಲ್ಲಾ ಕ್ಲಿನಿಕ್‌ಗಳು ಕೂಡ ಕಾರ್ಯವೆಸಗಲಿವೆ ಎಂದು ಪ್ರಕಟಿಸಿದರು.