ಕಿತ್ತೂರು: ಐತಿಹಾಸಿಕ ಚನ್ಮಮ್ಮನ ಕಿತ್ತೂರು ಕರ್ನಾಟಕದ ಶಕ್ತಿ ಕೇಂದ್ರವಾಗಬೇಕು. ರಾಣಿ ಕಿತ್ತೂರು ಚನ್ನಮ್ಮನ ಲಿಂಗೈಕ್ಯ ಜ್ಯೋತಿಯು ಕೇವಲ ಲಿಂಗಾಯತ ಸಮಾಜದ ಜ್ಯೋತಿಯಾಗಬಾರದು, ಇಡಿ ರಾಜ್ಯದ 7 ಕೋಟಿ ಕನ್ನಡಿಗರ ಜ್ಯೋತಿಯಾಗಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ವೀರ ಮಹಿಳೆ ಕಿತ್ತೂರ ರಾಣಿ ಚನ್ನಮ್ಮನವರ 195 ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ರಾಣಿ ಚನ್ನಮ್ಮನವರ ತವರು ಮನೆ ಕಾಕತಿಯಿಂದ ಆಗಮಿಸಿದ ಲಿಂಗೈಕ್ಯ ಜ್ಯೋತಿಯನ್ನು ಕಿತ್ತೂರು ಪಟ್ಟಣದ ಹೆದ್ದಾರಿ ಪಕ್ಕದಲ್ಲಿ ಇರುವ ಚನ್ನಮ್ಮ ಸರ್ಕಲ್‌ನಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಐತಿಹಾಸಿಕ ಕಿತ್ತೂರು ಅಭಿವೃದ್ಧಿ ವಿಷಯದಲ್ಲಿ ಸರ್ಕಾರಗಳು ಮಲತಾಯಿ ಧೋರಣೆ ತೋರುತ್ತಿವೆ. ನಮ್ಮ ಕಿತ್ತೂರು ಅಭಿವೃದ್ಧಿ ಆಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ ಅವರು, ಎಲ್ಲರೂ ಸೇರಿ ಕಿತ್ತೂರು ನಾಡನ್ನು ವಿಶ್ವಮಟ್ಟದಲ್ಲಿ ತೆಗೆದುಕೊಂಡು ಹೋಗುವಲ್ಲಿ ಶ್ರಮ ವಹಿಸೋಣ ಎಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ರಾಣಿ ಚನ್ನಮ್ಮನವರ ಪುಣ್ಯತಿಥಿ ಕುರಿತು ಕೆಲವರಿಗೆ ಮಾಹಿತಿ ಇಲ್ಲ. ಬರುವ ದಿನಗಳಲ್ಲಿ ಪ್ರತಿ ಪುಣ್ಯತಿಥಿಯಂದು ಅತಿ ಅದ್ದೂರಿಯಾಗಿ ಆಚರಣೆ ಮಾಡೋಣ. ಮುಂಬರುವ ದಿನಗಳಲ್ಲಿ ಕಿತ್ತೂರು ಕೋಟೆಯ ಅಭಿವೃದ್ಧಿ ಮಾಡಲಾಗುವುದು ಎಂದರು.