ಚಿಕ್ಕಬಳ್ಳಾಫುರ: ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಮಾಜಿ ಸಚಿವ ಡಾ.ಕೆ ಸುಧಾಕರ್ (K Sudhakar) ಪಕ್ಷದ ಚಟುವಟಿಕೆಗಳಲ್ಲಿ ಅಷ್ಟೊಂದು ಆಕ್ಟಿವ್ ಆಗಿ ಇರಲ್ಲಿಲ್ಲ. ಆದರೆ ಕೆ. ಸುಧಾಕರ್ ಇತ್ತೀಚಿಗೆ ಕೇಂದ್ರ ಗೃಹ ಸಚಿವಅಮಿತ್ ಶಾ(Amit Shah) ಅವರನ್ನು ಭೇಟಿಯಾಗಿದ್ದರು. ದೆಹಲಿ ಪ್ರವಾಸ ಮುಗಿಸಿ ರಾಜ್ಯಕ್ಕೆ ಆಗಮಿಸಿದ ಬಳಿಕ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ (Chikkaballapur) ಮಿಂಚಿನ ಸಂಚಾರ ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೂ 2-3 ತಿಂಗಳು ಬಾಕಿ ಇದ್ದು, ಈಗಾಗಲೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಹೌದು ದೇವಮೂಲೆಯಾದ ಚೇಳೂರು ತಾಲೂಕಿನ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರಾಶ್ಚರವು, ಚಾಕವೇಲು, ಸಜ್ಜಲವಾರಪಲ್ಲಿ ನಲ್ಲಗುಟ್ಲಪಲ್ಲಿ ಗಂಗಮ್ಮ ಬೆಟ್ಟ, ಪಾಳ್ಯಾಕೆರೆ ಗ್ರಾಮಗಳಿಂದ ಇಂದು (ಫೆ.04) ಚುನಾವಣಾ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವರಿಷ್ಠರು ಸಮ್ಮತಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನನ್ನ ಸ್ಪರ್ಧೆಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಹೆಚ್ಡಿ ಕುಮಾರಸ್ವಾಮಿ ಸಮ್ಮತಿಸಿದ್ದಾರೆ. ಒಬ್ಬ ಸಂಸದ ಏನು ಮಾಡಬಹುದೆಂದು ತೋರಿಸುತ್ತೇನೆ. ಕೆ. ಸುಧಾಕರ್ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ಸುಧಾಕರ್. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ತಮ್ಮ ಪಾತ್ರವೂ ಇದೆ. ಎಂಟಿಬಿ ನಾಗರಾಜ್, ನಾನು ರಿಸ್ಕ್ ತೆಗೆದುಕೊಂಡು ಬಿಜೆಪಿ ಸೇರಿದ್ದೆವು. ಆದರೆ, ನಮ್ಮ ತ್ಯಾಗಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಅನ್ಯಾಯವಾಗಿದೆ. ದೇಶ ಅಭಿವೃದ್ಧಿಯಾಗಬೇಕು ಅಂದರೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದರು.