ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ (Bangalore North Lok Sabha constituency) ವ್ಯಾಪ್ತಿಯನ್ನು ಗಮನಿಸಿದಾಗ ಕಳೆದ ಚುನಾವಣೆಯಲ್ಲಿ ನಾವು ಸಾಕಷ್ಟು ಮತಗಳನ್ನು ಕಳೆದುಕೊಂಡಿದ್ದೇವೆ. ಕಳೆದುಕೊಂಡಿರುವುದನ್ನು ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ನಾವು ಪಡೆದುಕೊಳ್ಳಬೇಕು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಹೆಚ್ಚಿಸಿ, ಈ ಕ್ಷೇತ್ರ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ (BJP Karnataka) ಯಾವುದೇ ಒಂದು ಕಲ್ಲು ನಿಂತರೂ ಗೆಲ್ಲುವ ಕ್ಷೇತ್ರ ಆಗಿದೆ ಎಂದು ಮಾಜಿ ಸಿಎಂ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ. ಸದಾನಂದಗೌಡ (DV Sadananda Gowda) ಹೇಳಿದರು.
ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ನಡೆಯುತ್ತಿರುವ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಡಿ.ವಿ. ಸದಾನಂದಗೌಡ, ನಮ್ಮ ವ್ಯತ್ಯಾಸಗಳು ಏನಿದ್ದರೂ ಅದನ್ನು ಹಿರಿಯರ ಜತೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಸಣ್ಣಪುಟ್ಟ ವಿಷಯಗಳ ಬಗ್ಗೆ ಮಾತನಾಡೋದನ್ನು ಬಿಟ್ಟು ಬಿಡೋಣ. ಲೆಕ್ಕ ಕೊಡುವ ಜವಾಬ್ದಾರಿ ಬೇಡ, ಕೆಲಸ ಮಾಡುವ ಜವಾಬ್ದಾರಿ ಬೇಕು. ಪಕ್ಷದ ಆದೇಶದಂತೆ ಎಲ್ಲರೂ ಕೆಲಸ ಮಾಡಬೇಕು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾವುದೇ ಒಂದು ಕಲ್ಲು ನಿಂತರೂ ಗೆಲ್ಲುವ ಕ್ಷೇತ್ರ ಆಗಿದೆ. ಇಡೀ ದೇಶದಲ್ಲಿ ನಂಬರ್ ಒನ್ ಆಗಿ ಜಯಗಳಿಸಲಿದೆ. ನಾವು ಮತ್ತೆ ಒಂದಾಗಿ, ಒಟ್ಟಾಗಿ ಕೆಲಸ ಮಾಡೋಣ. ಹಾಲಿ, ಮಾಜಿ ಆದರೇನೂ, ಮಾಜಿ ಆದರೂ ಹಾಲಿ ಎಂದು ತಿಳಿದುಕೊಂಡು ಪಕ್ಷದ ಗೆಲುವಿಗೆ ಕೆಲಸ ಮಾಡೋಣ ಎಂದು ಹೇಳಿದರು.