ನವದೆಹಲಿ,ಫೆ.3- ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿ ರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಮುಂದಿನ ವಾರದಿಂದಲೇ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟ ಆರಂಭಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರವೇ ನೇರವಾಗಿ ಜನಸಾಮಾನ್ಯರಿಗೆ ಪ್ರತಿ ಕೆಜಿಗೆ 29 ರೂ.ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ.
ಅಲ್ಲದೇ ಸಗಟು ಖರೀದಿದಾರರು ತಮ್ಮ ಬಳಿ ಹೊಂದಿರುವ ಅಕ್ಕಿ ಸಂಗ್ರಹದ ಪ್ರಮಾಣವನ್ನೂ ಬಹಿರಂಗಪಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಈ ಬಗ್ಗೆ ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ ಮಾತನಾಡಿದ್ದು, ಕಳೆದ ಒಂದು ವರ್ಷದಲ್ಲಿ ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಶೇ.15ರಷ್ಟು ಹೆಚ್ಚಳವಾಗಿದೆ. ವಿವಿಧ ಮಾದರಿಯ ಅಕ್ಕಿ ರಫ್ತಿನ ಮೇಲೆ ನಿಯಂತ್ರಣ ಹೇರಿದ್ದರೂ ದರ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಕೇಂದ್ರ ಸರ್ಕಾರವೇ ಮುಂದಿನ ವಾರದಿಂದ ಜಾರಿಗೆ ಬರುವಂತೆ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ ಅಕ್ಕಿಗೆ 29 ರೂ. ನಂತೆ ಮಾರಾಟ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.