ಬೆಂಗಳೂರು :ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ದೊಡ್ಡ ಸವಾಲನ್ನು ಮುಂದಿಟ್ಟುಕೊಂಡು ಬಜೆಟ್ ರೂಪಿಸುತ್ತಿರುವ ಹಣಕಾಸು ಇಲಾಖೆಗೆ ವಿದ್ಯುತ್ ಹೊರೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದು, ವಿದ್ಯುತ್ ಬಳಕೆದಾರರು ಮತ್ತು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಪರವಾಗಿ ದನಿ ಎತ್ತಿದೆ.
ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಅಭಿಪ್ರಾಯ ತಿಳಿಸಿರುವ ಆಯೋಗ, ಗಂಭೀರ ಸಂಗತಿಯನ್ನು ಪ್ರಸ್ತಾಪಿಸಿದೆ. ಇದೀಗ ಇಂಧನ ಇಲಾಖೆಯು ಆಯೋಗದ ಅಭಿಪ್ರಾಯವನ್ನು ಹಣಕಾಸು ಇಲಾಖೆ ಮುಂದೆ ಮಂಡಿಸಿದ್ದು, ಲೆಕ್ಕಾಚಾರಗಳನ್ನು ಪುನರ್ ಪರಿಶೀಲಿಸುವ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ. ಆದರೆ, ಆಯೋಗದ ಅಭಿಪ್ರಾಯಕ್ಕೆ ಸರ್ಕಾರದ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗಿದೆ.