ಬೆಂಗಳೂರು, ಜನವರಿ 25: ಮುಂಬರುವ ಲೋಕಸಭಾ ಚುನಾವಣೆಗೆ ( Lok Sabha Elections 2024) ಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ (BJP, JDS seat sharing) ಶೀಘ್ರ ಅಂತಿಮಗೊಳ್ಳಲಿದೆ.
ಜನವರಿ 27ರ ನಂತರ ದೆಹಲಿಯಲ್ಲಿ ಉಭಯ ಪಕ್ಷಗಳ ನಾಯಕರು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈಗಾಗಲೇ ಕ್ಷೇತ್ರದ ಹಂಚಿಕೆ ಕುರಿತು ಎರಡು ಸುತ್ತಿನ ಸಭೆ ನಡೆಸಿದ್ದಾರೆ. ಬಿಜೆಪಿ ನಾಯಕರ ಜೊತೆ ಹೆಚ್ಡಿ ಕುಮಾರಸ್ವಾಮಿ ಎರಡು ಸುತ್ತಿನ ಚರ್ಚೆ ಮಾಡಿದ್ದಾರೆ.
ನಾಲ್ಕು ಕ್ಷೇತ್ರಗಳ ಬದಲು 3 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಜೆಡಿಎಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ, ಹಾಸನ, ಮಂಡ್ಯ ಕ್ಷೇತ್ರ ಬಿಟ್ಟು ಕೊಡಲು ಬಿಜೆಪಿ ಕೂಡ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಂದು ಕ್ಷೇತ್ರ ತೆಗೆದುಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ. ಮಂಡ್ಯ, ಹಾಸನ ಸೇರಿ ಐದು ಲೋಕಸಭಾ ಕ್ಷೇತ್ರಗಳ ಸಮೀಕ್ಷೆಯನ್ನು ಜೆಡಿಎಸ್ ಮಾಡಿಸಿದೆ. ಈ ಪೈಕಿ ನಾಲ್ಕು ಲೋಕಸಭಾ ಕ್ಷೇತ್ರಗಳ ಸಮೀಕ್ಷಾ ವರದಿ ಜೆಡಿಎಸ್ಗೆ ಪೂರಕವಾಗಿ ಬಂದಿದೆ. ಹೀಗಾಗಿ ಜೆಡಿಎಸ್ ಗೆಲ್ಲಲು ಅವಕಾಶ ಇರುವ ಮೂರೂ ಕ್ಷೇತ್ರಗಳನ್ನು ನೀಡುವಂತೆ ಕುಮಾರಸ್ವಾಮಿ ಬಿಜೆಪಿ ನಾಯಕರ ಬಳಿ ಕೇಳಿದ್ದಾರೆ. ಹೀಗಾಗಿ 27 ನಂತರ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಜೊತೆ ಕುಮಾರಸ್ವಾಮಿ ಅಂತಿಮ ಸಭೆ ನಡೆಸಿ ಕ್ಷೇತ್ರ ಹಂಚಿಕೆಯ ಅಂತಿಮ ಘೋಷಣೆ ಮಾಡುವ ಸಾಧ್ಯತೆ ಇದೆ.
ಹಾಸನದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಮಂಡ್ಯದಿಂದ ಕುಮಾರಸ್ವಾಮಿ ಅಥವಾ ಮಾಜಿ ಸಚಿವ ಸಿಎಸ್ ಪುಟ್ಟರಾಜು ಸ್ಪರ್ಧಿಸುವುದು ಬಹುತೇಕ ಅಂತಿಮಗೊಂಡಿದೆ.