ಕಲಬುರಗಿ: ನಗರದಲ್ಲಿರುವ ಘೋಷಿತ ಕೊಳೆಗೇರಿಗಳಲ್ಲಿ ಕೆಲ ಪ್ರದೇಶಗಳ ಅರ್ಧದಷ್ಟು ಭಾಗ ಅಘೋಷಿತವಾಗಿ ಉಳಿದಿದ್ದು, ಜನರಿಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ.
ಸಂಜೀವನಗರ ಕೊಳೆಗೇರಿ ಪ್ರದೇಶ ಇದಕ್ಕೆ ಉತ್ತಮ ಉದಾಹರಣೆ. ಇದು ಖಾಸಗಿಯವರ ಜಾಗದಲ್ಲಿದೆ. ಕೆಲ ಭಾಗವನ್ನು ಕೊಳೆಗೇರಿ ಎಂದು ಘೋಷಿಸಲಾಗಿದೆ.
80 ಮನೆಗಳಿರುವ ಪ್ರದೇಶ ಅಘೋಷಿತವಾಗಿ ಉಳಿದಿದೆ. ಇಲ್ಲಿಯ ಜನರಿಗೆ ಹಕ್ಕುಪತ್ರಗಳಿಲ್ಲದ ಕಾರಣ ಸರ್ಕಾರದ ಸೌಲಭ್ಯಗಳೂ ದಕ್ಕುತ್ತಿಲ್ಲ. ಕೊಳೆಗೇರಿ ಅಭಿವೃದ್ಧಿ ಮಂಡಳಿಯೂ ಅಭಿವೃದ್ಧಿಗೆ ಮುಂದಾಗುತ್ತಿಲ್ಲ.
ಇಲ್ಲಿನ ಜನಕ್ಕೆ ಸಮಸ್ಯೆಯ ಸರಪಳಿಯಿಂದ ಕಳಚಿಕೊಂಡು ಹೊರಬರಲಾಗುತ್ತಿಲ್ಲ. ವಿದ್ಯುತ್ ಹಾಗೂ ಕುಡಿಯುವ ನೀರಿನಂಥ ಮೂಲ ಸೌಕರ್ಯಗಳೂ ಮರೀಚಿಕೆಯಾಗಿವೆ. ಮೀಟರ್ ಅಳವಡಿಸಿಕೊಳ್ಳುತ್ತೇವೆ. ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ದಮ್ಮಯ್ಯ ಎಂದರೂ ಸ್ಪಂದಿಸುತ್ತಿಲ್ಲ. ಕಡ್ಡಿ ಪೆಟ್ಟಿಗೆ ಆಕಾರದ ಟಿನ್ನಿನ ಮನೆಗಳಲ್ಲಿ ಇಲ್ಲಿನ ಜನ ವಾಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ನೆಹರೂ ಗಂಜ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿದ್ದಾರೆ.
ಈ ಪ್ರದೇಶಕ್ಕೆ ಇದುವರೆಗೂ ಮಹಾನಗರ ಪಾಲಿಕೆ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಇಲ್ಲಿ ಸಾರ್ವಜನಿಕ ನಲ್ಲಿಗಳು ನೋಡಲೂ ಸಿಗುವುದಿಲ್ಲ. ಕೈಗೆತ್ತಿಕೊಂಡ ಕುಡಿಯುವ ನೀರಿನ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ. ಇಲ್ಲಿನ ಜನ ನೀರಿಗಾಗಿ ಕೊಡ ಹಿಡಿದುಕೊಂಡು ಬಡಾವಣೆಗಳಿಂದ ಬಡಾವಣೆಗಳಿಗೆ ಅಲೆಯುತ್ತಾರೆ. ಚರಂಡಿ ಹಾಗೂ ಕಸ ವಿಲೇವಾರಿ ಸಮಸ್ಯೆ ಇನ್ನೂ ಅಬಾಧಿತವಾಗಿದೆ.