ಬೈಲಹೊಂಗಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಅಂಗವಾಗಿ ಗ್ರಾಮದ ಗ್ರಾ.ಪಂ. ಆವರಣದಲ್ಲಿ ಗುರುವಾರ ನಡೆದ ಪುರುಷರ ಮತ್ತು ಮಹಿಳೆಯರ ಹೊನಲುಬೆಳಕಿನ ರಾಷ್ಟ್ರ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳು ಸಹಸ್ರಾರು ಕುಸ್ತಿಪ್ರೇಮಿಗಳನ್ನು ರೋಮಾಂಚನಗೊಳಿಸಿತು.
ಕುಸ್ತಿ ಕಣವನ್ನು ಹೂವುಗಳಿಂದ ಶೃಂಗರಿಸಲಾಗಿತ್ತು. ಪೈಲ್ವಾನರನ್ನು ಪ್ರೇಕ್ಷಕರು ಹುರುದುಂಬಿಸಿದರು. ವಿಜಯಪುರ ಭೂತನಾಳ
ತಾಂಡದ ಅಶೋಕ ವಾಲಿಕರ ತಂಡದ ಹಲಿಗೆ ವಾದನ ಕುಸ್ತಿ ಪಟುಗಳಿಗೆ, ಪ್ರೇಕ್ಷಕರಿಗೆ ಹುಮ್ಮಸ್ಸು ನೀಡಿತು. ಒಟ್ಟು 30ಕ್ಕೂ ಹೆಚ್ಚು ಜೋಡಿ ಕುಸ್ತಿ ಪಟುಗಳು ಭಾಗವಹಿಸಿದ್ದರು.
ಪುರುಷ ವಿಭಾಗ: ಮಹಾರಾಷ್ಟ್ರ ಮಹಾನ್ ಭಾರತ ಕೇಸರಿ ಪೈ.ಜ್ಞಾನೇಶ್ವರ (ಮೌಳಿ) ಜಮದಾಳೆ ಜೊತೆ ಸೆಣಸಿದ ಹರಿಯಾಣದ ರಾಷ್ಟ್ರೀಯ ಮಟ್ಟದ ಕುಸ್ತಿಪಟು ವಿಶಾಲ ಡೊಲು ಫ್ರಂಟ್ ಜೀಸಾ ಡಾವ್ ಪೇಚ್ ಮೂಲಕ ವಿಜಯದ ನಗೆ ಬೀರಿದರು. ದೆಹಲಿ ಪೈ. ಸಚಿನಕುಮಾರ-ರಾಣೆಬೆನ್ನೂರಿನ ಕರ್ನಾಟಕ ಕೇಸರಿ ಪೈ.ಕಾರ್ತಿಕ ಕಾಟೆ ನಡುವಿನ ಕುಸ್ತಿಯಲ್ಲಿ ಕಾಟೆ ಇವರು ಏಕ ಲಂಗೀ ಡಾಂಗ್ ಮೂಲಕ ವಿಜಯ ಪತಾಕೆ ಹಾರಿಸಿದರು. ಧಾರವಾಡದ ಕರ್ನಾಟಕ ಕೇಸರಿ ಪೈ.ನಾಗರಾಜ ಬಸಿಡೋಣಿ ಇವರು ಏಕ ಚಕ್ಕ್ ಡಾವ್ ಪೇಚ್ ಮೂಲಕ ಹರಿಯಾಣದ ಪೈ.ಉದಯ ಅವರನ್ನು ಸೋಲಿಸಿದರು. ಕಲಬುರಗಿಯ ಪೈ.ಪ್ರವೀಣ ಹಿಪ್ಪರಗಿ ಜೊತೆ ಸೆಣಸಿದ ಮಹಾರಾಷ್ಟ್ರದ ಪೈ. ಪ್ರಣಿತ್ ಭೋಸಲೆ ಸೋಲುಂಡರು.
ದಾವಣೆಗೆರೆಯ ಪೈ.ಬಸವರಾಜ ಹುದಲಿ ಜೊತೆ ಸೆಣಸಿದ ಸೊಲ್ಲಾಪೂರದ ಪೈ.ಸಾಗರ ಚೌಗಲೆ ವಿಜಯ ಪತಾಕೆ ಹಾರಿಸಿದರು.
ಅಥಣಿಯ ಪೈ.ಮಹೇಶಕುಮಾರ ಲಂಗೋಟಿ ಅವರು ಮಹಾರಾಷ್ಟ್ರದ ಪೈ.ಚೇತನ ಕತಗಾರ ಅವರನ್ನು ಸೋಲಿಸಿದರು.
ಮಹಿಳಾ ವಿಭಾಗ: ದಸರಾ ಕಿಶೋರಿ ಹಳಿಯಾಳದ ಪೈ. ಪ್ರೀನ್ಸಟ್ ಸಿದ್ಧಿ-ಮಹಾರಾಷ್ಟ್ರದ ಪೈ.ದೀಪಾಲಿ ನಡುವಿನ ಕುಸ್ತಿ ಹಾಗೂ ಹಲಗಾದ ಪೈ.ಲಕ್ಷ್ಮೀ ಪಾಟೀಲ-ಮಹಾರಾಷ್ಟ್ರದ ಪೈ.ಸಾಧನಾ ಕಾಟ್ಕರ್ ನಡುವಿನ ಕುಸ್ತಿಗಳು ಸಮಬಲಗೊಂಡವು. ಬಾಗಲಕೋಟೆಯ ಪೈ.ಕಾವೇರಿ ಯಾಡಹಳ್ಳಿ ಅವರನ್ನು ಸೋಲಿಸಿ ಗದಗದ ಪೈ.ಭುವನೇಶ್ವರಿ ವಿಜಯದ ಪತಾಕೆ ಹಾರಿಸಿದರು.