ಚಿಕ್ಕಮಗಳೂರು, (ಜನವರಿ 10): ಲೋಕಸಭೆ ಚುನಾವಣೆ (Loksabha Election 2024) ಹತ್ತಿರವಾಗುತ್ತಿದ್ದಂತೆಯೇ ಗೆಲುವಿನ ಸೂತ್ರ ಹೆಣೆಯಲು ದಳ ಕೋಟೆಯಲ್ಲಿ ರೆಸಾರ್ಟ್ ರಾಜಕಾರಣ (resort Politics) ಶುರುವಾಗಿದೆ. ಚಿಕ್ಕಮಗಳೂರು(Chikkamagaluru) ತಾಲೂಕಿನ ಮಲ್ಲೇನಹಳ್ಳಿ ಸಮೀಪದ ರೆಸಾರ್ಟ್‌ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ (HD Kumaraswamy) 10 ರೂಂ ಬುಕ್ ಮಾಡಿ ಪಕ್ಷದ ನಾಯಕರ ಜೊತೆ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಅಷ್ಟಕ್ಕೂ ರೆಸಾರ್ಟ್ ರಾಜಕಾರಣ ಹಿಂದಿನ ಕಾರಣ ಕೆದಕುತ್ತಾ ಹೊರಟರೇ ಬೇರೆಯದ್ದೇ ಕಹಾನಿ ತೆರೆದುಕೊಳ್ಳುತ್ತೆ. ಅದುವೇ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ. ಹೌದು..ಕುಮಾರಸ್ವಾಮಿಯ ರೆಸಾರ್ಟ್ ರಾಜಕೀಯದ ಬಗ್ಗೆ ಜೆಡಿಎಸ್ ನಾಯಕ ಭೋಜೇಗೌಡ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಜೆಡಿಎಸ್ ನಾಯಕ ಭೋಜೇಗೌಡ, ಮಂಡ್ಯ, ಹಾಸನ ಜೆಡಿಎಸ್ ನ ಭದ್ರಕೋಟೆ. ನಾವು ಮಂಡ್ಯದಲ್ಲಿ ಸೋತಿರಬಹುದು. ಆದ್ರೆ, ಪುಟ್ಟರಾಜುಗಿಂತ ನಿಖಿಲ್ ಕುಮಾರಸ್ವಾಮಿ 60 ಸಾವಿರ ಜಾಸ್ತಿ ಮತ ಪಡೆದಿದ್ದರು. ನಮ್ಮ ಬೇಸ್ ಇಲ್ಲದೆ ಅಷ್ಟು ಮತಗಳು ಬಂದಿದೆ. ಇನ್ನು ಈ ಬಾರಿ ಮಂಡ್ಯದಲ್ಲಿ ಕುಮಾರಸ್ವಾಮಿ ನಿಲ್ಲಬೇಕು ಎಂದು ಸೋತ ಶಾಸಕರು, ನಮ್ಮ ಕಾರ್ಯಕರ್ತರು ಒತ್ತಡ ತರುತ್ತಿದ್ದಾರೆ ಎಂದು ಹೇಳಿದರು.