ಬೆಂಗಳೂರು: ಲೋಕಸಭೆ ಚುನಾವಣೆ ತಯಾರಿ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ನಲ್ಲಿ ಮೂರು ರೀತಿಯ ಗೊಂದಲ ಸೃಷ್ಟಿಯಾಗಿದೆ. ಸಮರ್ಥ ಅಭ್ಯರ್ಥಿ ಲಭ್ಯರಿಲ್ಲದ ಕಡೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಚಿವರು ಹಿಂದೇಟು ಹಾಕುತ್ತಿರುವುದು, ನಿಗಮ- ಮಂಡಳಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ನೈಜ ಕಾರ್ಯಕರ್ತರ ಕಡೆಗಣನೆ ಹಾಗೂ ಜಾತಿವಾರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಪಟ್ಟುಗಳು ಹೈಕಮಾಂಡ್ಗೂ ಸವಾಲು ತಂದೊಡ್ಡಿದೆ.
ಡಿಕೆಶಿಯವರನ್ನೇನು ಡಿಸ್ಟರ್ಬ್ ಮಾಡಲ್ಲವಲ್ಲ!: ಇನ್ನಷ್ಟು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ವಿಷಯದಲ್ಲಿ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಬೇರೆ, ನಮ್ಮ ಬೇಡಿಕೆಯೇ ಬೇರೆ. ಸಮುದಾಯವಾರು ಕೊಡಿ ಎಂಬುದು ನಮ್ಮ ಬೇಡಿಕೆ. ಅವರನ್ನೇನು ತೆಗೆಯಿರಿ ಎಂದು ಹೇಳುತ್ತಿಲ್ಲವಲ್ಲ. ಅವರನ್ನೇನು ಡಿಸ್ಟರ್ಬ್ ಮಾಡಲ್ಲವಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಜತೆ ಸಭೆ ನಡೆಸಿದ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದ ಅವರು, ಕಳೆದ ಚುನಾವಣೆಯಲ್ಲಿ ಅನೇಕ ಜಾತಿಗಳು ಪ್ರಬಲವಾಗಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿವೆ. ಅವರಿಗೂ ಉಪ ಮುಖ್ಯಮಂತ್ರಿ ಅವಕಾಶ ಕೊಡಬೇಕಾಗುತ್ತದೆ. ಲೋಕಸಭೆ ಚುನಾವಣೆಗೆ ಮುನ್ನ ನೇಮಕ ಮಾಡಿ ಎಂದು ಪಕ್ಷದ ರಾಜ್ಯ ಉಸ್ತುವಾರಿಯವರಿಗೆ ಹೇಳಿದ್ದೇವೆ ಎಂದರು. ಎಷ್ಟು ಡಿಸಿಎಂ, ಯಾರಿಗೆ ಕೊಡಬೇಕೆಂಬುದು ಹೈಕಮಾಂಡ್ಗೆ ಬಿಟ್ಟಿದ್ದು. ಲೋಕಸಭೆಗೆ ಮುನ್ನ ಮಾಡಬೇಕೆಂಬುದು ನಮ್ಮ ಆಗ್ರಹ ಎಂದ ಅವರು, ನಮ್ಮ ಬೇಡಿಕೆ ಬಗ್ಗೆ ಸುರ್ಜೆವಾಲ ಮನವರಿಕೆ ಆಗಿದ್ದಾರೆ. ಇಷ್ಟೆಲ್ಲ ಸಚಿವರು ಹೇಳಿದ ಮೇಲೆ ಮನವರಿಕೆ ಆಗದೇ ಇರುತ್ತಾರಾ? ಎಂದರು.
ಡಿಕೆಶಿ ಪವರ್ ಕಟ್?: ಇನ್ನೂ 3-4 ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಪಟ್ಟು ಪಕ್ಷದಲ್ಲಿ ಬಿಗಿಯಾಗುತ್ತಿದೆ. ಹಿರಿಯ ಸಚಿವರೇ ಒಗ್ಗಟ್ಟಾಗಿ ಬೇಡಿಕೆ ಮುಂದಿಟ್ಟಿರು ವುದರಿಂದ ಹೈಕಮಾಂಡ್ಗೂ ಕಸಿವಿಸಿ. ಡಿಸಿಎಂ ಡಿ.ಕೆ.ಶಿವಕುಮಾರ್ ಶಕ್ತಿಯನ್ನು ಕುಂದಿಸುವ ಲೆಕ್ಕಾಚಾರದಲ್ಲಿ ಈ ತಂತ್ರ ರೂಪು ಗೊಳ್ಳುತ್ತಿದೆ ಎಂಬ ವಾದವೂ ಇದೆ. ಮುಸ್ಲಿಂ, ದಲಿತ, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಒಂದೊಂದು ಡಿಸಿಎಂ ಸ್ಥಾನ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಲಾಭವಾಗಲಿದೆ ಎಂಬ ದಾಳವನ್ನು ಸಚಿವರ ತಂಡ ಉರುಳಿಸಿದೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತ್ರ ಈ ಪ್ರಸ್ತಾಪವನ್ನು ತಳ್ಳಿಹಾಕಿದ್ದು, ಲೋಕಸಭೆ ಚುನಾವಣೆ ಎದುರಿಗಿರುವಾಗ ಇಂತಹ ಚರ್ಚೆ ಬೇಡ ಎಂದಿದ್ದಾರೆ. ಮಂಗಳವಾರ ಸಂಜೆ ಸುರ್ಜೆವಾಲ ಭೇಟಿ ಮಾಡಿದ್ದ ಡಿ.ಕೆ ಶಿವಕುಮಾರ್ ನಿಗಮ, ಮಂಡಳಿ ನೇಮಕ ಸೇರಿದಂತೆ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.