ಚಿಕ್ಕೋಡಿ: ದೇಶವನ್ನು ಲೂಟಿ ಮಾಡಿದವರಿಗೆ ಭಾರತೀಯ ಸಂಸ್ಕೃತಿ ನಾಶ ಮಾಡಲು ಬಿಜೆಪಿ ಬಿಡಲ್ಲ. ಕಾಂಗ್ರೆಸ್ ಅಧಿಕಾರದ ಆಸೆಯಿಂದ ದೇಶ ತುಂಡು ತುಂಡಾಯಿತು. ಜನೇವರಿ 22 ರಾಮ ಮಂದಿರ ಉದ್ಘಾಟನೆ ದಿನದಂದು ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಶ್ರೀ ರಾಮಸೇನೆಯಿಂದ ಆಯೋಜಿಸಿದ್ದ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಅಖಂಡ ಭಾರತ ನಿರ್ಮಾಣಕ್ಕೆ ಜೈ ಶ್ರೀರಾಮ ಘೋಷಣೆ ದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ. ಪಾಕಿಸ್ತಾನ ದೇಶದವರು ಸಹ ಮೋದಿ ಪ್ರಧಾನಿ ಆಗಿ ಬರಲಿ ಎಂದು ಬಯಸುತ್ತಿದ್ದಾರೆ ಎಂದರು.
ಮಥುರಾ, ಕಾಶಿ ದೇವಸ್ಥಾನಗಳ ಸರ್ವೇ ಮಾಡಿಸಿ, ಕೋರ್ಟ್ ಮುಖಾಂತರ ಅವುಗಳನ್ನು ಪಡೆದು ಕಾಶಿ ವಿಶ್ವನಾಥ, ಮಥುರಾ ಶ್ರೀಕೃಷ್ಣ ದೇವಸ್ಥಾನವೂ ಶೀಘ್ರದಲ್ಲಿ ನಿರ್ಮಾಣ ಆಗುತ್ತವೆ. ದೇಶದಲ್ಲಿ ಶ್ರೀ ರಾಮನ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮನ್ನು ವಿರೋಧಿಸಿದವರ ಹೊಟ್ಟೆಯಲ್ಲಿ ಕಸಿವಿಸಿ ಆಗುತ್ತಿದೆ ಎಂದು ತಿಳಿಸಿದರು.
ಪ್ರಿಯಾಂಕ ಖರ್ಗೆ ಎನ್ನುವ ಚಿಲ್ಲರೆ ನರೆಂದ್ರ ಮೋದಿ ಬಗ್ಗೆ ಮಾತನಾಡುತ್ತಾನೆ ಪ್ರಧಾನಿ ಮೋದಿ ಸೂರ್ಯ ಇದ್ದ ಹಾಗೆ. ಸೂರ್ಯನಿಗೆ ಉಗಿದರೆ, ಉಗಿದಿದ್ದು ಪ್ರಿಯಾಂಕ ಖರ್ಗೆ ಅವರಿಗೇ ಮರಳಿ ಬರುತ್ತದೆ ಎಂದು ಈಶ್ವರಪ್ಪ ಕಿಡಿಕಾರಿದರು. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಮಾತನಾಡಿ, ಕಾಂಗ್ರೆಸ್‌ನ ವಿಕೃತಿಗಳಿಗೆ, ದೇಶದ್ರೋಹಿಗಳಿಗೆ ಪ್ರಧಾನಿ ಮೋದಿ ಅವರೇ ಉತ್ತರ. ಕಾಂಗ್ರೆಸ್‌ಗೆ ವೋಟ್ ಹಾಕಿದ್ರೆ ಭಯೋತ್ಪಾದಕರಿಗೆ, ಬಾಬರಗೆ, ಟಿಪ್ಪುಸುಲ್ತಾನಗೆ, ಔರಂಗಜೇಬ್ ,ಪಾಕಿಸ್ತಾನಕ್ಕೆ ವೋಟ್ ಹಾಕಿದ ಹಾಗೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
2014ರ ಮುಂಚೆ ದೇಶದಲ್ಲಿ ಭಯೋತ್ಪಾದನೆ, ಅಶಾಂತಿ, ಭ್ರಷ್ಟಾಚಾರ, ವಂಶಾಡಳಿತ ತುಂಬಿ ತುಳುಕುತ್ತಿತ್ತು. ಆದರೆ ನರೇಂದ್ರ ಮೋದಿಯವರು ಪ್ರಧಾನಿ ಆದ ಬಳಿಕ ಭ್ರಷ್ಟಾಚಾರ, ಭಯೋತ್ಪಾದನೆಗೆ ಅಂತ್ಯ ಹಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ದೇಶದಲ್ಲಿ ಪ್ರಧಾನಿ ಆಗಲಿ ಎಂದು ಮೋದಿ ಗೆಲ್ಲಿಸಿ ಭಾರತ ಉಳಿಸಿ ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, 60 ವರ್ಷದ ಕಾಂಗ್ರೆಸ್ ಆಡಳಿತ ಒಂದೆಡೆ ಆದರೆ 10 ವರ್ಷಗಳ ಮೋದಿಯವರ ಆಡಳಿತ ಅಭಿವೃದ್ಧಿಯಲ್ಲಿ ತನ್ನದೇ ಆದ ಕೆಲಸ ಮಾಡಿ ತೋರಿಸಿದೆ. ವಿಶ್ವದಲ್ಲಿ ಭಾರತ ಮುಂಚೂಣಿಯಲ್ಲಿದೆ. ಒಂದು ಕಾಲದಲ್ಲಿ ಹಾವಾಡಿಗರ ದೇಶ ಎಂದು ಟೀಕೆ ಮಾಡುತ್ತಿದ್ದರು. ಇಂದು ಅವರೇ ಸ್ವಾಗತ ಮಾಡುತ್ತಿದ್ದಾರೆ. ಸ್ವಾಭಿಮಾನಿ ರಾಷ್ಟ್ರದ ನಿರ್ಮಾಣಕ್ಕೆ ಮತ್ತೊಮ್ಮೆ ಮೋದಿಯವರ ಆಡಳಿತ ಬರಬೇಕಾಗಿದೆ ಎಂದರು.
ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ, ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ವಿಶ್ವದಲ್ಲಿ ಭಾರತವನ್ನು ನಂಬರ್ ಒನ್ ಮಾಡುವುದು ಮೋದಿಯಿಂದ ಮಾತ್ರ ಸಾಧ್ಯವಿದೆ ಎಂದರು. ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಶಾಸಕ ದುರ್ಯೋಧನ ಐಹೊಳೆ ಮಾತನಾಡಿದರು.
ಹಿರಿಯ ಪುರಸಭೆ ಸದಸ್ಯ ಜಗದೀಶ ಕವಟಗಿಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕೋಕೇತರ, ವಿಭಾಗೀಯ ಅಧ್ಯಕ್ಷರು, ಶಾಂಭವಿ ಅಶ್ವತ್ಥಪೂರ ,ಬಸವರಾಜ ಕಲ್ಯಾಣಿ, ವಿಠಲ ಗಡ್ಡಿ, ಬಸವರಾಜ ಅಲ್ಲನವರ, ಮಹಾದೇವ ನಿಲಜನ್ನಗಿ, ಶಕುಂತಲಾ ಡೊಣವಾಡೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.